ಬೆಂಗಳೂರು: "ನಾವು ಯಾವುದನ್ನೂ ಮುಚ್ಚಿ ಹಾಕೋದಿಲ್ಲ, ಎಲ್ಲದರ ತನಿಖೆ ನಡೆಯುತ್ತೆ. ಈಗಾಗಲೇ ಇದರ ಬಗ್ಗೆ ಸಿಎಂ ಸ್ಪಷ್ಟೀಕರಣ ಕೊಟ್ಟಿದ್ದಾರೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಮುಡಾ ಪ್ರಕರಣ ಮುಚ್ಚಿ ಹಾಕಲು ಹುನ್ನಾರ ಎಂಬ ಬಿಜೆಪಿ, ಹೆಚ್‌ಡಿಕೆ ಆರೋಪಗಳ ಕುರಿತು ಪ್ರತಿಕ್ರಿಯಿಸಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat) "ಸಿಎಂ ಆಗಲು ಪೈಪೋಟಿ ನಡೆಸುತ್ತಿರುವವರು ಮುಡಾ ಪ್ರಕರಣವನ್ನು ಬಯಲಿಗೆ ತಂದಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆ ಬಗ್ಗೆಯೂ ನನಗೆ ಗೊತ್ತಿಲ್ಲ. ಮುಡಾ ಪ್ರಕರಣದಲ್ಲಿ ಇಲಾಖೆ ತನಿಖೆ ನಡೆಯುತ್ತಿದೆ. ಹೀಗಾಗಿ ಎಸ್ಐಟಿ ತನಿಖೆ ಅಗತ್ಯವಿಲ್ಲ. ಈಗಾಗಲೇ ಇದರ ಬಗ್ಗೆ ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ" ಎಂದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಕುರಿತು ಮಾತನಾಡಿ, "ಆರೋಪಿಗಳನ್ನು ಬಂಧಿಸಲಾಗಿದೆ, ಸಾಕ್ಷ್ಯಗಳ ಸಂಗ್ರಹ ನಡೆಯುತ್ತಿದೆ. ಚಾರ್ಜ್‌ಶೀಟ್ ಹಾಕುತ್ತಾರೆ. ಪ್ರಕರಣದ ತನಿಖೆ ಶೀಘ್ರಗತಿಯಲ್ಲಿ ಮಾಡುವುಂತೆ ಮಾಧ್ಯಮದವರು ಹೇಳಿ ಬಿಟ್ಟರೆ ಆಗುತ್ತಾ? ಅದಕ್ಕೇ ಆದಂಥ ನಿಯಮ, ಪ್ರಕ್ರಿಯೆಗಳಿವೆ. ಅಗತ್ಯ ಸಾಕ್ಷ್ಯ ಸಂಗ್ರಹಿಸಿ ಚಾರ್ಜ್‌ಶೀಟ್ ಹಾಕ್ತಾರೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಅಗತ್ಯ ಇಲ್ಲ, ಮಾಡೋದೂ ಇಲ್ಲ" ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿಗಳಿಂದ ಆರ್ಥಿಕ ವಿಪತ್ತು, ಗ್ಯಾರಂಟಿ ರದ್ದಿಗೆ ಸೂಚಿಸಿ ಎಂದು ಕೇಂದ್ರಕ್ಕೆ ಯತ್ನಾಳ್ ಪತ್ರ ಬರೆದ ವಿಚಾರವಾಗಿ ಮಾತನಾಡಿ, "ರಾಜ್ಯದ ಆಡಳಿತ ನಡೆಸಲು ಜನ ನಮ್ಮನ್ನು ಆರಿಸಿರುವುದು, ಅವರನ್ನಲ್ಲ. ಕೇಂದ್ರದಲ್ಲಿ ಅವರಿಗೆ ಆಡಳಿತ ನಡೆಸಲು ಜನ ಅವಕಾಶ ಕೊಟ್ಟಿದ್ದಾರೆ. ಅವರು ಅಲ್ಲಿ, ನಾವು ಇಲ್ಲಿ ಆಡಳಿತ ನಡೆಸುತ್ತೇವೆ. ಪತ್ರ ಬರೆದಿದ್ದಾರೆ, ಕೇಂದ್ರದ ನಿರ್ದೇಶನ ಬರಲಿ, ಆಮೇಲೆ ನೋಡುತ್ತೇವೆ. ಗ್ಯಾರಂಟಿಗಳಿಂದ ಆರ್ಥಿಕ ಮುಗ್ಗಟ್ಟು ಇದೆ ಅನ್ನೋದು ಬಿಜೆಪಿಯವರ ಆರೋಪ. ಅದನ್ನು ಆಡಳಿತ ನಡೆಸುವ ನಾವು ಹೇಳಿಲ್ಲವಲ್ಲ. ನಾವು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಏನು ಮಾಡಬೇಕೋ ಅದಕ್ಕಾಗಿ ಗ್ಯಾರಂಟಿ ಜಾರಿ ಮಾಡಿದ್ದೇವೆ. ಸಮಸ್ಯೆ ಏನಾದರೂ ಬಂದರೆ ಅದನ್ನು ಪರಿಹರಿಸುವ ಜವಾಬ್ದಾರಿ ನಮ್ಮದೇ. 58 ಸಾವಿರ ಕೋಟಿ ರೂ. ಹಣವನ್ನು ನಾವು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿಗಳ ಸಾಧಕ - ಬಾಧಕ ನಾವೇ ನೋಡಿಕೊಳ್ಳುತ್ತೇವೆ. ಇದರಲ್ಲಿ ಬಿಜೆಪಿಯವರ ಸಲಹೆ ಸೂಚನೆ ನಮಗೆ ಬೇಕಾಗಿಲ್ಲ" ಎಂದು ತಿರುಗೇಟು ನೀಡಿದರು.
ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂಬ ಜೋಶಿ ಟೀಕೆ ಕುರಿತು ಪ್ರತಿಕ್ರಿಯಿಸಿ, "ಮಾನ್ಯ ಜೋಶಿಯವರು ಪತ್ರ ಬರೆಯಲಿ. ನಾವು ಅವರ ಪತ್ರಕ್ಕೆ ಯಾವ ರೀತಿ ಸ್ಪಂದಿಸುತ್ತೇವೆ ಎನ್ನುವುದು ಅವರಿಗೆ ಗೊತ್ತಾಗುತ್ತೆ" ಎಂದು ಟಾಂಗ್ ಕೊಟ್ಟರು.
ಸಿಎಂ, ಡಿಸಿಎಂ ಚರ್ಚೆಗೆ ಫುಲ್ ಸ್ಟಾಪ್ ಹಾಕಿ ಎಂದು ಹೈಕಮಾಂಡ್ ಸಂದೇಶ ಬಂದಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, "ಮೊನ್ನೆ ನಾವೆಲ್ಲಾ ದೆಹಲಿಗೆ ಹೋಗಿದ್ದೆವು. ಆಗ ಹೈಕಮಾಂಡ್ ಆ ವಿಚಾರವಾಗಿ ಏನೂ ಮಾತಾಡಲೇ ಇಲ್ಲ. ಒಳ್ಳೆಯ ಕೆಲಸ ಮಾಡ್ತಿದ್ದೀರಿ ಅಂತ ನಮಗೆ ಶಹಬ್ಬಾಸ್‌ಗಿರಿ ಕೊಟ್ಟು ಕಳಿಸಿದ್ರು" ಎಂದರು.
ಇದನ್ನೂ ಓದಿ:ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಹೆಚ್‌ಡಿಕೆ - H D Kumaraswamy