ಕರ್ನಾಟಕ

karnataka

ETV Bharat / state

ಆನೆಗೊಂದಿ ಉತ್ಸವದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಗಡ್ಕರಿಗೆ ಆಹ್ವಾನ: ಜನಾರ್ದನ ರೆಡ್ಡಿ - Koppal

ಆನೆಗೊಂದಿ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವಂತೆ ಕೇಂದ್ರ ಸಚಿವ ಗಡ್ಕರಿ ಅವರಿಗೆ ಆಹ್ವಾನ ನೀಡಲಾಗುವುದು ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ  Union Minister Nitin Gadkari  ಶಾಸಕ ಜಿ ಜನಾರ್ದನ ರೆಡ್ಡಿ  ಕೊಪ್ಪಳ  Koppal
ಆನೆಗೊಂದಿ ಉತ್ಸವದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಗಡ್ಕರಿಗೆ ಆಹ್ವಾನ: ಶಾಸಕ ಜಿ. ಜನಾರ್ದನ ರೆಡ್ಡಿ

By ETV Bharat Karnataka Team

Published : Mar 3, 2024, 11:00 AM IST

ಗಂಗಾವತಿ:''ಆನೆಗೊಂದಿ ಉತ್ಸವ-2024 ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಆಹ್ವಾನಿಸಲು ಎರಡು ದಿನಗಳ ಕಾಲ ದೆಹಲಿಗೆ ಭೇಟಿ ನೀಡಲಾಗುವುದು'' ಎಂದು ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ತಾಲ್ಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಗೆ ರೋಪ್ ವೇ ನಿರ್ಮಾಣ ಮಾಡಲು ಹೆದ್ದಾರಿ ಸಚಿವಾಲಯದಿಂದ ಅನುದಾನ ಸಿಕ್ಕಿದ್ದು, ಕಾಮಗಾರಿ ಉದ್ಘಾಟನೆಗೆ ಆಹ್ವಾನಿಸುವ ಉದ್ದೇಶವಿದೆ. ಮಾರ್ಚ್​ 11 ಮತ್ತು 12ರಂದು ನಡಯಲಿರುವ ಆನೆಗೊಂದಿ ಉತ್ಸವದಲ್ಲಿ ಭಾಗವಹಿಸುವಂತೆ ಕೋರಲು ದೆಹಲಿಗೆ ಪ್ರಯಾಣಿಸುತ್ತಿದ್ದೇನೆ'' ಎಂದರು.

ತಿರುಪತಿ ಮಾದರಿ ಅಭಿವೃದ್ಧಿ:''ಅಂಜನಾದ್ರಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈವರೆಗೆ ಒಟ್ಟು 240 ಕೋಟಿ ರೂ ಬಿಡುಗಡೆ ಮಾಡಿದೆ. ಈ ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೆಸ್ ಆಡಳಿತದ ಸರ್ಕಾರದ ಅವಧಿಯಲ್ಲಿ ತಲಾ 100 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹೆಚ್ಚುವರಿ 40 ಕೋಟಿ ಮಂಜೂರಾಗಿದೆ. ಒಟ್ಟು 240 ಕೋಟಿ ಅನುದಾನ ಸಿಕ್ಕಿದ್ದು, ಇದರಲ್ಲಿ ಐವತ್ತು ಕೋಟಿ ರೂಪಾಯಿ ಮೊತ್ತದ ಅನುದಾನ ಭೂಸ್ವಾಧೀನ ಪರಿಹಾರಕ್ಕೆ ಹೋಗುತ್ತದೆ. ಉಳಿದ ಅನುದಾನದಲ್ಲಿ ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ, ದೇಗುಲದ ಸುತ್ತಲೂ ಕಲ್ಲಿನ ಮಂಟಪ ನಿರ್ಮಿಸಲಾಗುವುದು. ಬೆಟ್ಟ ಹತ್ತುವ ಭಕ್ತರಿಗೆ ವಿಶ್ರಾಂತಿಧಾಮ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ತಿರುಮಲಾಪುರದಿಂದ ಗಂಗಾವತಿಯ ಸಾಯಿ ದೇವಸ್ಥಾನದವರೆಗೆ ರಸ್ತೆ ಅಗಲೀಕರಣ ಮಾಡಿ ರಸ್ತೆಯ ಎರಡೂ ಕಡೆಗಳಲ್ಲಿ ವಿದ್ಯುತ್ ಕಂಬ ಅಳವಡಿಸಲಾಗುವುದು. ಭಕ್ತರು ಪಾದಯಾತ್ರೆಯ ಮೂಲಕ ಅಂಜನಾದ್ರಿಗೆ ಹೋದರೂ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು'' ಎಂದು ಮಾಹಿತಿ ನೀಡಿದರು.

ಹಂಪಿ ಜೊತೆಯೇ ಆನೆಗೊಂದಿ ಉತ್ಸವಕ್ಕೆ ಮನವಿ:''ಇನ್ನು ಮುಂದೆ ಹಂಪಿ ಉತ್ಸವದ ಜೊತೆಗೆ ಆನೆಗೊಂದಿ ಉತ್ಸವ ಆಚರಣೆ ಮಾಡುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿ, ಶಾಶ್ವತ ಅನುದಾನಕ್ಕೆ ಬೇಡಿಕೆ ಇಡಲಾಗುವುದು. ಈ ಸಂಬಂಧ ಹೊಸಪೇಟೆಯ ಶಾಸಕ ಎಚ್.ಆರ್.ಗವಿಯಪ್ಪ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹಂಪಿ ಜೊತೆಯಲ್ಲೇ ಆನೆಗೊಂದಿ ಉತ್ಸವ ಆಚರಣೆ ಮಾಡಬೇಕು ಎಂಬ ಉದ್ದೇಶವಿದೆ. ಹಂಪಿ ಉತ್ಸವದ ಮಾದರಿಯಲ್ಲಿ ಆನೆಗೊಂದಿ ಉತ್ಸವಕ್ಕೂ ಶಾಶ್ವತ ಅನುದಾನ ನೀಡುವುದು ಹಾಗೂ ಪ್ರತೀ ವರ್ಷ ಯಾವ ಸಂದರ್ಭದಲ್ಲಿ ಉತ್ಸವ ಮಾಡಬೇಕು ಎಂಬ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಮಾಡಿಸಲು ಪ್ರಯತ್ನಿಸಲಾಗುವುದು'' ಎಂದು ಜನಾರ್ದನ ರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ:ಪಾಳುಬಿದ್ದ ಕೃಷಿ ಭೂಮಿ ಪುನಶ್ಚೇತನಕ್ಕೆ ಮಸೂದೆ ತರಲು ಆಡಳಿತ ಸುಧಾರಣಾ ಆಯೋಗ ಶಿಫಾರಸು

ABOUT THE AUTHOR

...view details