ಚಿಕ್ಕೋಡಿ: 2022ರಲ್ಲಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ. ಅವನನ್ನು ಸಹ ಬಂಧನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಬುಧವಾರ ನಡೆದ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಹಿಂದೆ 2022ರಲ್ಲಿ ಬಿಜೆಪಿ ಸರ್ಕಾರ ಆಡಳಿತಾವಧಿಯಲ್ಲಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ. ಆ ಪ್ರಕರಣವನ್ನು ಬಿಜೆಪಿಯವರು ಮುಚ್ಚಿಹಾಕಿದ್ದಾರೆ. ಆದರೆ ನಾವು ಮರು ತನಿಖೆ ನಡೆಸಲು ತೀರ್ಮಾನಿಸಿದ್ದೇವೆ ಮತ್ತು ಆ ಪ್ರಕರಣವನ್ನು ರೀ ಓಪನ್ ಮಾಡ್ಸಿ ಆರೋಪಿಯನ್ನು ಬಂಧನ ಮಾಡಲಾಗುವುದು ಎಂದು ಹೇಳಿದರು.
ಬಳಿಕ ಎರಡು ದಿನದಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುತ್ತೇವೆ. ಇದರಲ್ಲಿ ಬೆಳಗಾವಿ, ಚಿಕ್ಕೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ನಿಮ್ಮ ಕೆಲಸ ಮಾಡಿದ್ದೇವೆ, ನಮಗೆ ಕೂಲಿ ರೂಪದಲ್ಲಿ ಮತ ನೀಡಿ. ಜಿಲ್ಲೆಯಿಂದ ಕಾಂಗ್ರೆಸ್ನ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಸಿಎಂ ಮನವಿ ಸಲ್ಲಿಸಿದರು. ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ಜನರು ಹೆಚ್ಚು ಭೇಟಿ ನೀಡುತ್ತಾರೆ. ಎಲ್ಲಾ ಸಮುದಾಯ ಕುಟುಂಬಗಳಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಕೊಡುತ್ತೇವೆ. ಇದರಿಂದ ರಾಜ್ಯದಲ್ಲಿ ಒಳ್ಳೆಯ ಆಡಳಿತ ನಡೆಯುತ್ತಿದೆ ಎಂದು ತಿಳಿಸಿದರು.
ನಂತರ ಶಾಸಕ ಲಕ್ಷ್ಮಣ್ ಸವದಿ ಕುರಿತು ಮಾತನಾಡಿ, ಒಳ್ಳೆಯ ರಾಜಕಾರಣಿಗಳಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ಇದೆ. ಸವದಿ ಮಂತ್ರಿ ಸ್ಥಾನವನ್ನು ಕೇಳಲಿಲ್ಲ, ನೀರಾವರಿ ಯೋಜನೆ ಕೊಡುವಂತೆ ಕೇಳಿದರು, ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಯಾಗಿತ್ತು. ಈ ಯೋಜನೆಗೆ 1486 ಕೋಟಿ ರೂಪಾಯಿ ಖರ್ಚು ಆಗುತ್ತದೆ. ಈ ಭಾಗದಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಯೋಜನೆ ಕಲ್ಪಿಸುತ್ತದೆ, ಕೃಷ್ಣಾ ನದಿಯಿಂದ ಮೂರು ಟಿಎಂಸಿ ನೀರು ಎತ್ತಲಾಗುತ್ತದೆ. ಕೃಷ್ಣಾ ನದಿಯಲ್ಲಿ ನೀರು ಕೂಡ ಲಭ್ಯವಿದ್ದು ಇದರಿಂದ ಈ ಭಾಗಕ್ಕೆ ನೀರಾವರಿ ಯೋಜನೆ ರೂಪಿಸಲಾಗಿದೆ ಎಂದರು.
ಈ ಯೋಜನೆಯಿಂದ ಅಥಣಿ ತಾಲೂಕು 95% ನೀರಾವರಿ ಹೊಂದುತ್ತದೆ. ಈ ಯೋಜನೆಯಿಂದ ಕೆರೆಗಳನ್ನು ತುಂಬಿಸಲಾಗುವುದು. ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ, ಕೆರೆಗಳನ್ನು ತುಂಬುವುದಕ್ಕೆ ನಾಲ್ಕು ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಖರ್ಚು ಮಾಡಿದೆ. ನೀರಾವರಿಗೋಸ್ಕರ ನಾವು ಪಾದಯಾತ್ರೆ ನಡೆಸಿದ್ದೆವು. ನೀರಾವರಿಗೋಸ್ಕರ 56 ಸಾವಿರ ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಿದ್ದೇವೆ, ಅಪ್ಪರ್ ಕೃಷ್ಣಾ ಪ್ರಾಜೆಕ್ಟ್ ಮುಖಾಂತರ ಹಲವು ಭಾಗಗಳಿಗೆ ನೀರು ಕೊಡಬಹುದು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ, ಮಹದಾಯಿ ಯೋಜನೆ ಬಗ್ಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ನಾಳೆಯೇ ಕಾಮಗಾರಿಗೆ ಚಾಲನೆ ಕೊಡುತ್ತೇವೆ ಎಂದು ಸಿಎಂ ಹೇಳಿದರು.
ಅಥಣಿ ತಾಲೂಕಿಗೆ ಗಡಿ ಹೊಂದಿರುವ ಮಹಾರಾಷ್ಟ್ರದ ಜತ್ತ ತಾಲೂಕಿನ ಗಡಿ ಕನ್ನಡಿಗರು ಸಿಎಂ ಗಮನ ಸೆಳೆಯಲು ಭಿತ್ತಿ ಪತ್ರ ಪ್ರದರ್ಶನ ಮಾಡಿದರು. ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಸಲ್ಲಿಸಿದರು. ಜೊತೆಗೆ ಮಹಾರಾಷ್ಟ್ರ ಮಾಜಿ ಸಚಿವ ವಿಕ್ರಂ ಜೀತ ಕದಮ್ ಹಾಗೂ ಜತ್ತ ಶಾಸಕ ವಿಕ್ರಮ್ ಸಿಂಗ್ ಶಾವಂತ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಮುಖಾಂತರ ಜತ್ತ ತಾಲೂಕಿನ ಕೆಲವು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವಂತೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:ಗೌರಿಗೆ ಒಲಿದ ಗಂಗೆ: ಮಹಿಳೆಯ ಭಗೀರಥ ಸಾಹಸಕ್ಕೆ 50 ಅಡಿಯ ಬಾವಿಯಲ್ಲಿ ಚಿಮ್ಮಿದ ನೀರು