ಸಂಸದ ಬಸವರಾಜ ಬೊಮ್ಮಾಯಿ (ETV Bharat) ಬೆಂಗಳೂರು : ಸುಮ್ಮನೆ ನಮ್ಮ ವಿರುದ್ಧ ಪಟ್ಟಿ ಓದಿದರೆ ಆಗಲ್ಲ, ಅದಕ್ಕೆ ಪುರಾವೆ ಕೊಡಬೇಕು. ಸರ್ಕಾರ ಅವರದ್ದೇ ಇದ್ದು, ತನಿಖೆ ಮಾಡಿಸಲಿ. ಯಾವುದೇ ರೀತಿಯ ತನಿಖೆ ಮಾಡಿಸಲಿ, ಸರ್ಕಾರದ ತನಿಖೆ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬಿಜೆಪಿ ಕಾಲದ ಭ್ರಷ್ಟಾಚಾರ ತನಿಖೆ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸವಾಲು ಹಾಕಿದ್ದಾರೆ.
ಆರ್ಟಿನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಸರ್ಕಾರ ಸಿಕ್ಕಿಕೊಂಡಿದೆ. ನಿಗಮದ ಹಣ ದೋಚಿರುವುದು ಸ್ಪಷ್ಟ ಆಗಿದೆ. ರಾಜಕೀಯಕ್ಕೆ, ಚುನಾವಣೆಗೆ, ಸಾರಾಯಿ ಕೊಳ್ಳಲು ಆ ಹಣ ಬಳಕೆ ಆಗಿದೆ. ಸಾಕ್ಷಿಗಳು ಸಿಕ್ಕಿವೆ. ತಾವು ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬರುತ್ತದೆ ಅಂತ ಬಿಜೆಪಿ ಅವಧಿಯಲ್ಲಿ 21 ಅಕ್ರಮ ಆಗಿವೆ ಅಂದಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ತಮ್ಮ ಇಮೇಜ್ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನ ಪಡುತ್ತಿದ್ದಾರೆ ಎಂದು ಆರೋಪಿಸಿದರು.
ಯಾವುದೇ ರೀತಿಯ ತನಿಖೆ ಮಾಡಿಸಲಿ. ಸರ್ಕಾರದ ತನಿಖೆ ಎದುರಿಸಲು ನಾವು ಸಿದ್ಧರಾಗಿದ್ದೇವೆ. ಆದರೆ ರಾಜಕೀಯ ದುರುದ್ದೇಶಕ್ಕಾಗಿ ಅಧಿಕಾರದ ದುರ್ಬಳಕೆ ಆಗಬಾರದು. ಸುಮ್ಮನೆ ನಮ್ಮ ವಿರುದ್ಧ ಪಟ್ಟಿ ಓದಿದರೆ ಆಗಲ್ಲ, ಅದಕ್ಕೆ ಪುರಾವೆ ಕೊಡಬೇಕಲ್ಲ. ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದಾರೆ. ಅದಕ್ಕೆ ಪುರಾವೆಗಳೂ ಇದ್ದಾವಲ್ಲ ಎಂದು ತಿರುಗೇಟು ನೀಡಿದರು.
ಕರಪ್ಷನ್ ಬ್ರಹ್ಮ ಯಾರು ಅಂತ ಗೊತ್ತಾಗಿದೆ. ಅವರು ಈಗ ಹಗರಣಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಸತ್ಯ ಹೊರಗೆ ಬರುತ್ತದೆ ಎಂದು ಸಿಎಂ ರಾಜಕೀಯ ಭವಿಷ್ಯ ನುಡಿದರು.
ನಮ್ಮ ಕಾಲದಲ್ಲಿ ಎಪಿಎಂಸಿ ಪ್ರಕರಣದಲ್ಲಿ 51 ಕೋಟಿ ರೂಪಾಯಿ ಬಡ್ಡಿ ಸಮೇತ ವಸೂಲಿ ಮಾಡಿದ್ದೇವೆ. ಇನ್ನೂ ತನಿಖೆ ನಡೆಯುತ್ತಿದೆ. ಭೋವಿ ನಿಗಮದ ಅಕ್ರಮದ ಬಗ್ಗೆಯೂ ಸಿದ್ದರಾಮಯ್ಯ ಹೇಳ್ತಾರೆ. ಭೋವಿ ನಿಗಮದ ಅಕ್ರಮದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ನಾವೇ ಸಿಐಡಿಗೆ ಕೊಟ್ಟಿದ್ದು. ಗಂಗಾ ಕಲ್ಯಾಣ ಯೋಜನೆ ಅಕ್ರಮದಲ್ಲೂ ಸಿಐಡಿ ತನಿಖೆ ನಡೀತಿದೆ. ಉಳಿದ ಅಕ್ರಮಗಳ ಬಗ್ಗೆ ಆಯೋಗಗಳು, ಎಸ್ಐಟಿ ರಚಿಸಲಾಗಿದೆ. 40% ಕಮೀಷನ್ ಆರೋಪ ಮಾಡಿದರು, ದಾಖಲೆ ಕೊಟ್ಟಿಲ್ಲ. ಅವರು ರಾಜಕೀಯ ದೃಷ್ಟಿಯಿಂದ ಆರೋಪ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ನಾವು ಎಲ್ಲವನ್ನೂ ಎದುರಿಸಲು ಸಿದ್ಧ ಇದ್ದೀವಿ. ಈಗ ಅವರದ್ದೇ ಸರ್ಕಾರ, ವಾಲ್ಮೀಕಿ ನಿಗಮ ಒಂದೇ ಅಲ್ಲ, ಎಲ್ಲ ಇಲಾಖೆಗಳಲ್ಲೂ ಅಕ್ರಮ ನಡೆದಿದೆ. ಕಾಂಗ್ರೆಸ್ ಅಂದರೆ ಕರಪ್ಷನ್ ಅನ್ನುವಂತಾಗಿದೆ. ಸ್ವಾತಂತ್ರ್ಯ ನಂತರ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್. ಅವರ ಹೇಳಿಕೆಗಳಿಗೆ ನಾವು ಹೆದರಿಕೊಳ್ಳಲ್ಲ, ನಾವು ಅವರಂತೆ ಸಿಬಿಐ ಯಾಕೆ ಬಂತು, ಇಡಿ ಯಾಕೆ ಬಂತು ಅಂತ ಹೇಳಲ್ಲ. ನಾವು ಅವರ ಹಾಗೆ ಅಂಜುಬುರುಕರು ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಈ ಸರ್ಕಾರಕ್ಕೆ ಒಳ್ಳೆ ಆಡಳಿತ ಕೊಡುವ ಉದ್ದೇಶ ಇಲ್ಲ, ತಮ್ಮನ್ನು ಗೆಲ್ಲಿಸಿದ್ದ ಜನರನ್ನೇ ಮರೆತ ಹೊಣೆಗೇಡಿ ಸರ್ಕಾರ ಇದು. ಮಳೆ ಆಗುತ್ತಿದ್ರೂ ಸಿಎಂ, ಸಚಿವರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಭೇಟಿ ಮಾಡಿಲ್ಲ. ಕುಮಾರಸ್ವಾಮಿ ಅವರು ಹೋದ ಮೇಲೆ ಇವರು ಹೋಗಿದ್ದಾರೆ. ಜನರನ್ನ ಯಾಮಾರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಬಜೆಟ್ ನಲ್ಲಿ ಸಾಕಷ್ಟು ಮೂಲಸೌಕರ್ಯ, ರೈಲು, ಕೃಷಿ ವಲಯಗಳಿಗೆ ಹೆಚ್ಚಿನ ಹಣ ನಿಗದಿ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಕಾಂಗ್ರೆಸ್ ಶಾಸಕರ ಪರಿಸ್ಥಿತಿ ಏನಾಗಿದೆ ಅಂದರೆ, ಕ್ಷೇತ್ರಕ್ಕೆ ಅನುದಾನ, ಅಭಿವೃದ್ಧಿ ಇಲ್ಲದೇ ಜನರ ಸಮಸ್ಯೆ ಕೇಳೋಕೆ ಆಗುತ್ತಿಲ್ಲ. ಅತ್ತ ಸಚಿವರ ಬಳಿ ಹೋದರೆ ಶಾಸಕರ ಕಷ್ಟ ಕೇಳುತ್ತಿಲ್ಲ, ಅದಕ್ಕಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಕೇಳಿದ್ದಾರೆ. ಇವರ ಅಸಮಾಧಾನ ಮುಂದಿನ ರಾಜಕೀಯ ಬದಲಾವಣೆಗೆ ನಾಂದಿ ಹಾಡಬಹುದು ಎಂದರು.
ಶಿಗ್ಗಾಂವಿ ಉಪಚುನಾವಣೆ ತಯಾರಿ ಸಂಬಂಧ ಈಗಾಗಲೇ ಅಭ್ಯರ್ಥಿಗಳ ಆಯ್ಕೆಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯವರು ಕ್ಷೇತ್ರಕ್ಕೆ ಹೋಗಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುತ್ತಾರೆ. ಟಿಕೆಟ್ ಯಾರಿಗೆ ಕೊಡಬೇಕು ಅಂತ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನನ್ನ ಮಗನಿಗೆ ಟಿಕೆಟ್ ಕೊಡಿ ಅಂತ ನಾನೂ ಕೇಳಿಲ್ಲ ಎಂದರು.
ಇ.ಡಿ ವಿರುದ್ಧ ಕಾನೂನು ಸಮರಕ್ಕೆ ಸರ್ಕಾರ ಚಿಂತನೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಹಿಂದೆಯೂ ಅವರು ದೂರು ಕೊಡೋ ಕೆಲಸ ಮಾಡಿದ್ದರು. ಇವರಿಗೆ ಯಾಕೆ ಭಯ? ಅವರ ಹೆಸರು ಹೊರಗೆ ಬರುತ್ತದೆ ಅಂತ ಭಯವಿದೆ, ಹಗರಣಗಳನ್ನು ಮಾಡಿದ ಎಲ್ಲ ರಾಜಕಾರಣಿಗಳ ಸಾಮಾನ್ಯ ನಡೆ ಇದು. ಕುಂಬಳಕಾಯಿ ಕಳ್ಳ ಅಂದರೆ ಇವರು ಏಕೆ ಹೆಗಲು ಮುಟ್ಟಿ ನೋಡ್ಕೋಬೇಕು. ಹಿಂದೆ ಕಾಂಗ್ರೆಸ್ ಶಾಸಕರು, ಸಚಿವರು ನಮ್ಮನೆ ಮೇಲೆ ಐಟಿ ದಾಳಿ ಆಗುತ್ತದೆ ಅಂತಿದ್ದರು. ಅಲ್ಲೆಲ್ಲೋ ಐಟಿ ದಾಳಿಯಾದರೆ ನಮ್ಮ ಮೇಲೂ ಆಗುತ್ತದೆ ಅಂತಿದ್ರು ಎಂದು ಲೇವಡಿ ಮಾಡಿದರು.
ನಮ್ಮ ತಿರುಗೇಟು ತಾಳುವುದಕ್ಕೂ ಸಿದ್ಧರಾಗಿ :ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣದಲ್ಲಿ ಸಿಲುಕಿದ್ದರಿಂದ ಈಗ ಮತ್ತೆ ಪರಶುರಾಮ ಥೀಮ್ ಪಾರ್ಕ್ ನೆನಪಾಗಿದೆ. ನಿಮ್ಮನ್ನೆಲ್ಲ ಬಲಿ ಹಾಕುತ್ತೇನೆ ಎಂದು ಸದನದಲ್ಲಿ ತೊಡೆ ತಟ್ಟಿದಷ್ಟೇ ದಮ್ಮು- ತಾಕತ್ತು ನಿಜಕ್ಕೂ ಇದ್ದರೆ ಮೊದಲು ನ್ಯಾಯಸಮ್ಮತ ತನಿಖೆ ನಡೆಸಿ, ಬೇಕಾದರೆ ಸಿಬಿಐ ತನಿಖೆಗೂ ಆದೇಶಿಸಿ. ಎಸ್ಐಟಿ ರಚನೆ ಮಾಡಿದರೂ ನೋ ಪ್ರಾಬ್ಲಮ್. ಅದನ್ನು ಬಿಟ್ಟು ಅಪಪ್ರಚಾರದ ತುತ್ತೂರಿ ಊದುತ್ತಾ ಹೋದರೆ ನಮ್ಮ ತಿರುಗೇಟು ತಾಳುವುದಕ್ಕೂ ಸಿದ್ಧರಾಗಿ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಒಬ್ಬ ಮುಖ್ಯಮಂತ್ರಿಯಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ನಲ್ಲಿ ಹನ್ನೊಂದು ಕೋಟಿ ರೂ. ಹಗರಣವಾಗಿದೆ ಎಂದು ವಿಧಾನಸಭಾ ಕಲಾಪದಲ್ಲಿ ನೀವು ನನ್ನ ವಿರುದ್ಧ ಆರೋಪಿಸಿದ್ದೀರಿ. ಆದರೆ ಈ ಯೋಜನೆಗೆ ಇದುವರೆಗೆ ಬಿಡುಗಡೆಯಾಗಿದ್ದೇ 6 ಕೋಟಿ ರೂ. ಪರಶುರಾಮ ಥೀಂ ಪಾರ್ಕ್ನಲ್ಲಿ ಅವ್ಯವಹಾರ ನಡೆದಿದೆ ಎಂದು ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ನಾಯಕರು ಸುಳ್ಳು ನರೇಟಿವ್ ಕಟ್ಟುತ್ತಲೇ ಇದ್ದಾರೆ. ಇವರಿಗೆ ಸತ್ಯ ಬಹಿರಂಗವಾಗುವುದು ಬೇಕಿಲ್ಲ, ಪ್ರವಾಸೋದ್ಯಮ ಅಭಿವೃದ್ಧಿಯಾಗುವುದು ಬೇಕಿಲ್ಲ. ನಿರಂತರ ಆರೋಪ ನಡೆಸಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದು ಮಾತ್ರ ಉದ್ದೇಶ ಎಂದು ಟ್ವೀಟ್ ಮೂಲಕ ಸುನೀಲ್ ಕುಮಾರ್ ಹರಿಹಾಯ್ದಿದ್ದಾರೆ.
ಪ್ರತಿ ಬಾರಿಯೂ ಅಧಿವೇಶನ ಸಂದರ್ಭದಲ್ಲಿ ಥೀಂ ಪಾರ್ಕ್ ಬಗ್ಗೆ ಅಪಪ್ರಚಾರ ನಡೆಸುವುದು ಈ ಸರ್ಕಾರಕ್ಕೆ ಹಾಗೂ ಕಾರ್ಕಳ ಕಾಂಗ್ರೆಸ್ ಮುಖಂಡರಿಗೆ ಚಟವಾಗಿಬಿಟ್ಟಿದೆ. ಕಳೆದ ಅಧಿವೇಶನದ ಸಮಯದಲ್ಲಿ ತನಿಖೆ ನಡೆಸುತ್ತೇವೆ ಎಂದರು. ಸಿಐಡಿ ತನಿಖೆಗೂ ಸೂಚಿಸಿದರು. ಆದರೆ ಇದುವರೆಗೆ ತನಿಖೆ ಪ್ರಗತಿಯಾಗಿಲ್ಲ. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಚುನಾವಣೆ ನೀತಿ ಸಂಹಿತೆಯ ನೆಪ ಹೇಳಿ ತಪ್ಪಿಸಿಕೊಂಡರು. ಈಗ ಮುಡಾದಲ್ಲಿ ಭೂಮಿ ನುಂಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಹೈಕಮಾಂಡ್ ಭಂಡಾರ ತುಂಬಿ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಮತ್ತೆ ಪರಶುರಾಮ ಥೀಮ್ ಪಾರ್ಕ್ ನೆನಪಾಗಿದೆ ಎಂದು ಟೀಕಿಸಿದ್ದಾರೆ.
ನಿಮ್ಮನ್ನೆಲ್ಲ ಬಲಿ ಹಾಕುತ್ತೇನೆ ಎಂದು ಸದನದಲ್ಲಿ ತೊಡೆ ತಟ್ಟಿದಷ್ಟೇ ದಮ್ಮು- ತಾಕತ್ತು ನಿಜಕ್ಕೂ ಇದ್ದರೆ ಮೊದಲು ನ್ಯಾಯಸಮ್ಮತ ತನಿಖೆ ನಡೆಸಿ, ಬೇಕಾದರೆ ಸಿಬಿಐ ತನಿಖೆಗೂ ಆದೇಶಿಸಿ. ಎಸ್ಎಸ್ಎಸ್ಐಟಿ ರಚನೆ ಮಾಡಿದರೂ ನೋ ಪ್ರಾಬ್ಲಮ್. ಅದನ್ನು ಬಿಟ್ಟು ಅಪಪ್ರಚಾರದ ತುತ್ತೂರಿ ಊದುತ್ತಾ ಹೋದರೆ ನಮ್ಮ ತಿರುಗೇಟು ತಾಳುವುದಕ್ಕೂ ಸಿದ್ಧರಾಗಿ ಎಂದು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ :ನಾವು ಯಾವುದೇ ಬೆದರಿಕೆಯೊಡ್ಡಿಲ್ಲ, ಸತ್ಯಾಂಶ ಜನರ ಮುಂದಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ - CM Siddaramaiah