ಬೆಂಗಳೂರು: ವಯನಾಡು ಪ್ರಕೃತಿ ವಿಕೋಪದ ಸಂತ್ರಸ್ತರಿಗಾಗಿ ಎಲ್ಲೆಡೆಯಿಂದ ನೆರವು ಹರಿದುಬರುತ್ತಿದೆ. ಭೂ ಕುಸಿತದಲ್ಲಿ ಮರಣ ಹೊಂದಿದ ಕುಟುಂಬಗಳಿಗೆ, ಆಶ್ರಯ ಕಳೆದುಕೊಂಡ ನಿರಾಶ್ರಿತರಿಗೆ ಹಾಗೂ ಕೇರಳ ಸರ್ಕಾರಕ್ಕಾಗಿ ಬೆಂಗಳೂರು ಮಹಾನಗರ ಸ್ವಚ್ಛತೆ, ಲಾರಿ ಮಾಲೀಕರು, ಗುತ್ತಿಗೆದಾರರ ಸಂಘ ಮತ್ತು ಬಿಬಿಎಂಪಿಯ ಸ್ಮಶಾನ ಕಾಯುವ ಸಿಬ್ಬಂದಿ ನೆರವು ನೀಡಲು ನಿರ್ಧರಿಸಿದ್ದಾರೆ.
ಸೋಮವಾರ ನಡೆದ ಗುತ್ತಿಗೆದಾರರ ಸಭೆಯಲ್ಲಿ ಕೇರಳ ಸರ್ಕಾರಕ್ಕೆ ಸಹಾಯ ಹಸ್ತ ನೀಡುವಂತೆ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಯಿತು. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಜೂನ್ 2024ರ ಬಿಲ್ನಲ್ಲಿ ಶೇ.1 ರಷ್ಟು ಮೊತ್ತವನ್ನು ಮೂಲದಲ್ಲಿಯೇ ಕಟಾವಣೆ ಮಾಡಿಕೊಂಡು ಕ್ರೋಢೀಕರಣಗೊಳ್ಳುವ ಮೊತ್ತವನ್ನು ನೇರವಾಗಿ ಕೇರಳದ ಪ್ರಕೃತಿ ವಿಕೋಪ ಪರಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ನೀಡಲು ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಬಾಲಸುಬ್ರಮಣ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಮಶಾನ ಕಾಯುವ ಸಿಬ್ಬಂದಿಯ ಸಹಾಯ ಹಸ್ತ:ಭೀಕರ ಭೂ ಕುಸಿತದಿಂದಕೇರಳದ ವಯನಾಡಿನಲ್ಲಿ ಸ್ಮಶಾನ ರೀತಿಯ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯ ಸ್ಮಶಾನ ಕಾಯುವ ಸಿಬ್ಬಂದಿಯು ತಮ್ಮ ಒಂದು ತಿಂಗಳ ವೇತನ ನೀಡುವ ಮೂಲಕ ಅಲ್ಲಿನ ಸಂತ್ರಸ್ತರ ನೋವಿಗೆ ಸ್ಪಂದಿಸುತ್ತಿದ್ದಾರೆ.
20 ನೌಕರರು ತಮ್ಮ ಒಂದು ತಿಂಗಳ ವೇತನವನ್ನು ಕೇರಳ ವಯನಾಡಿನ ಸಂತ್ರಸ್ತರಿಗೆ ನೀಡುತ್ತಿದ್ದಾರೆ. 10,500 ರೂ.ಗಳ ಸಂಬಳ ಪಡೆಯುವ 20 ನೌಕರರು ವಯನಾಡು ಸಂತ್ರಸ್ತರಿಗೆ ತಮ್ಮ ಒಂದು ತಿಂಗಳ ವೇತನವನ್ನು ಕೇರಳ ಸಿಎಂ ಪರಿಹಾರ ನಿಧಿಗೆ ಕಳುಹಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.