ಬೆಳಗಾವಿ: 'ಮೊದಲ ಬರಗಾಲ ಬಿದ್ದಿದ್ದರಿಂದ ನಮ್ಮೂರಾಗ ಕೂಲಿ ಸಿಗಾತಿಲ್ಲ. ಈಗ ನೋಡಿದರೆ ನೀರಿಗೂ ರೊಕ್ಕ ಕೊಟ್ಟು ಖರೀದಿ ಮಾಡಬೇಕ್ರಿ. ಹೊಟ್ಟೆ ನೋಡಕೋದೋ..? ನೀರು ತಗೊಳ್ಳೋದೊ ಒಂದು ತಿಳ್ಯಾತಿಲ್ಲ'.. ಇದು ಬೆಳಗಾವಿ ತಾಲೂಕಿನ ಧಾಮಣೆ ಎಸ್. ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸಗೊಂಡನಹಟ್ಟಿ ಗ್ರಾಮದ ಮಹಿಳೆ ಬಾಳವ್ವ ಬಸವಂತ ಪಾಟೀಲ ಎಂಬುವರು ತಮ್ಮೂರಿನ ನೀರಿನ ಸಮಸ್ಯೆ ಕುರಿತು ಈಟಿವಿ ಭಾರತ ಮುಂದೆ ಅಳಲು ತೋಡಿಕೊಂಡ ಪರಿ.
'ಬೋರು ತೆಗೆದರು ನೀರು ಸಿಗುತ್ತಿಲ್ಲ. ನಿಮಗೆ ನೀರು ಕೊಡುತ್ತೇವೆ. ವೋಟು ಹಾಕಿ ಎಂದು ಚುನಾವಣೆ ಸಮಯದಾಗ ಬಂದು ಹೇಳಿ ವೋಟ್ ಹಾಕಿಸಿಕೊಂಡು ಹೋಗ್ತಾರ. ಅದಾದ ಮ್ಯಾಲೆ ನಮ್ಮ ಕಡೆ ಯಾರೂ ತಿರುಗಿ ನೋಡಲ್ಲ. ಶಾಸಕ ಅಭಯ ಪಾಟೀಲ ಅವರು ಮನೆ ಮುಂದೆ ನಲ್ಲಿ ಹಾಕಿಸ್ಯಾರ. ಆದರೂ ಅದರಲ್ಲಿ ನೀರು ಬರುತಿಲ್ಲ. ನೀರಿಗಾಗಿ ನಾವು ಎಲ್ಲಿಗೆ ಹೋಗೋದು ಅಂತಾ' ಆಕ್ರೋಶ ವ್ಯಕ್ತಪಡಿಸಿದರು.
ಒಂದು ಮನೆಗೆ 8 ಕೊಡ ನೀರು; ಮಾಸಗೊಂಡನಹಟ್ಟಿ ಗ್ರಾಮದಲ್ಲಿ ನೀರಿನ ಸಮಸ್ಯೆ ನಿವಾರಿಸಲು ತಾಲೂಕು ಆಡಳಿತದ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅದು ಒಂದು ಮನೆಗೆ 8 ಕೊಡ ಅಷ್ಟೇ. ಈ 8 ಕೊಡ ನೀರಿನಲ್ಲಿ 2-3 ದಿನ ಕಳೆಯಬೇಕು. ಒಂದೆಡೆ ರಣಬಿಸಿಲು, ಮತ್ತೊಂದೆಡೆ ನೀರಿಲ್ಲದೇ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ. ಟ್ಯಾಂಕರ್ ಬಂತು ಎಂದರೆ ಸಾಕು ಮಹಿಳೆಯರು, ವೃದ್ಧರು ಖಾಲಿ ಕೊಡಗಳನ್ನು ಹಿಡಿದು ನಿಲ್ಲಬೇಕು. ಅವರು ಕೊಟ್ಟಷ್ಟು ನೀರು ತುಂಬಿಕೊಳ್ಳಬೇಕು. ಇಲ್ಲವಾದರೆ 500 ರೂ. ಕೊಟ್ಟು ಒಂದು ಟ್ಯಾಂಕರ್ ನೀರು ಖರೀದಿಸಬೇಕು. ಮೊದಲೇ ಇಲ್ಲಿನ ಜನ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಾರೆ. ಬರಗಾಲ ಹಿನ್ನೆಲೆ ಯಾವುದೇ ಕೆಲಸವೂ ಸಿಗುತ್ತಿಲ್ಲ. ಇನ್ನು ಲೋಕಸಭೆ ಚುನಾವಣೆಯಲ್ಲಿ ಬ್ಯುಸಿ ಆಗಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಇಲ್ಲಿನ ಜನರ ಗೋಳು ಕೇಳಿಸುತ್ತಿಲ್ಲ.
ನೀರಿಗಾಗಿ ಸಾವಿರಾರು ರೂ. ಖರ್ಚು; ಮತ್ತೋರ್ವ ಮಹಿಳೆ ಪುಷ್ಪಾ ಪಾಟೀಲ ಮಾತನಾಡಿ, ಟ್ಯಾಂಕರ್ ಬಂತು ಎಂದರೆ ಜಗಳ ಮಾಡಿ ನೀರು ತುಂಬಿಕೊಳ್ಳುತ್ತೇವೆ. ಒಂದು ವೇಳೆ ನೀರು ಸಿಗದಿದ್ದರೆ ರೊಕ್ಕ ಕೊಟ್ಟು ನೀರು ಖರೀದಿಸುತ್ತೇವೆ. ಇಲ್ಲಿಯವರೆಗೆ ನೀರಿಗಾಗಿ 3 ಸಾವಿರ ರೂ. ಖರ್ಚು ಮಾಡಿದ್ದೇವೆ. ನಮ್ಮ ಗಂಡ ಗಾರೆ ಕೆಲಸ ಮಾಡಿ ದುಡಿದು ತಂದ ಹಣವನ್ನು ನೀರಿಗೆ ಖರ್ಚು ಮಾಡುತ್ತಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದರು.