ಕರ್ನಾಟಕ

karnataka

ETV Bharat / state

ವಿವಾದದ ಕೇಂದ್ರಬಿಂದು ವಿಜಯಪುರದಲ್ಲಿ ವಕ್ಫ್ ಆಸ್ತಿ ಎಷ್ಟಿದೆ? ಎಷ್ಟು ಎಕರೆ ಒತ್ತುವರಿಯಾಗಿದೆ? - WAQF ROW

ವಕ್ಫ್ ಆಸ್ತಿ ವಿವಾದದ ಕೇಂದ್ರಬಿಂದುವಾಗಿರುವ ವಿಜಯಪುರದಲ್ಲಿ ವಕ್ಫ್ ಆಸ್ತಿ ಎಷ್ಟಿದೆ, ಎಷ್ಟು ಎಕರೆ ಒತ್ತುವರಿಯಾಗಿದೆ ಮತ್ತು ಎಷ್ಟು ಜನರಿಗೆ ನೋಟಿಸ್ ನೀಡಲಾಗಿದೆ ಎಂಬ ವರದಿ ಇಲ್ಲಿದೆ.

ವಿವಾದದ ಕೇಂದ್ರ ಬಿಂದು ವಿಜಯಪುರದಲ್ಲಿ ವಕ್ಫ್ ಆಸ್ತಿಗಳ ಸ್ಥಿತಿಗತಿ ಏನಿದೆ
ವಿಜಯಪುರದಲ್ಲಿ ವಕ್ಫ್ ಆಸ್ತಿಗಳ ಸ್ಥಿತಿಗತಿ ಕುರಿತ ವರದಿ (ETV Bharat)

By ETV Bharat Karnataka Team

Published : Nov 8, 2024, 9:49 AM IST

ಬೆಂಗಳೂರು:ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ನೀಡಿದ ವಕ್ಫ್ ನೋಟಿಸ್ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂಸದ ತೇಜಸ್ವಿ ಸೂರ್ಯ ವಕ್ಫ್ ಮಂಡಳಿ ನೋಟಿಸ್ ಹೋರಾಟವನ್ನು ತೀವ್ರಗೊಳಿಸುವ ಮೂಲಕ ವಕ್ಫ್ ಗಲಾಟೆ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತು. ಈ ಬೆನ್ನಲ್ಲೇ ವಕ್ಫ್ ತಿದ್ದುಪಡಿ ಮಸೂದೆ ಮೇಲಿನ ಜೆಪಿಸಿ ಅಧ್ಯಕ್ಷರು ಆಗಮಿಸಿ, ರೈತರ ಸಮಸ್ಯೆ ಆಲಿಸಿದ್ದಾರೆ.

ವಿಜಯಪುರದಲ್ಲಿರುವ ವಕ್ಫ್ ಆಸ್ತಿ:ವಿಜಯಪುರದಲ್ಲಿ ಒಟ್ಟು 2,006 ವಕ್ಫ್ ಸಂಸ್ಥೆಗಳಿದ್ದು, 4,373 ವಕ್ಫ್ ಸ್ವತ್ತುಗಳಿವೆ. ವಿಜಯಪುರದ ಬಬಲೇಶ್ವರ ಹಾಗೂ ತಿಕೋಟ ತಾಲೂಕಿನಲ್ಲಿ 1,443 ಆಸ್ತಿಗಳಿದ್ದು, 300.31 ಎಕರೆ ವಕ್ಫ್ ಮಂಡಳಿ ಸ್ವಾಧೀನದಲ್ಲಿದೆ. ಬಸವನಬಾಗೇವಾಡಿ, ಕೊಲ್ಹಾರ್ ಮತ್ತು ನಿಡಗುಂದಿ ತಾಲೂಕಿನಲ್ಲಿ 694 ವಕ್ಫ್ ಆಸ್ತಿಗಳಿದ್ದು, 102.35 ಎಕರೆ ವಕ್ಫ್ ಸ್ವಾಧೀನದಲ್ಲಿದೆ.

ಮುದ್ದೇಬಿಹಾಳದ ತಾಳಿಕೋಟಿಯಲ್ಲಿ 645 ವಕ್ಫ್ ಆಸ್ತಿಗಳಿದ್ದು, 76.34 ಎಕರೆ ವಕ್ಫ್ ಮಂಡಳಿ ಸ್ವಾಧೀನದಲ್ಲಿದೆ. ಸಿಂದಗಿ, ದೇವರಹಿಪ್ಪರಗಿ ಮತ್ತು ಆಲ್ಮೇಲ್​​ನಲ್ಲಿ 695 ಆಸ್ತಿಗಳಿದ್ದು, 210.74 ಎಕರೆ ವಕ್ಫ್ ಮಂಡಳಿ ಸ್ವಾಧೀನದಲ್ಲಿದೆ. ಇನ್ನು ಇಂಡಿ ಹಾಗೂ ಚಡಚಣದಲ್ಲಿ 896 ಆಸ್ತಿಗಳಿದ್ದು, 80.26 ಎಕರೆ ವಕ್ಫ್ ಮಂಡಳಿ ಸ್ವಾಧೀನದಲ್ಲಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ.

1,345.15 ಎಕರೆ ವಕ್ಫ್ ಆಸ್ತಿ ಒತ್ತುವರಿ:ವಿಜಯಪುರದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ನಡೆದ ವಕ್ಫ್ ಅದಾಲತ್ ಬಳಿಕ ವಿಜಯಪುರದಲ್ಲಿ ರೈತರಿಗೆ ವಕ್ಫ್ ನೋಟಿಸ್ ನೀಡಲು ಪ್ರಾರಂಭಿಸಲಾಯಿತು. ಜಿಲ್ಲೆಯಲ್ಲಿ ಸುಮಾರು 1,345.15 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿರುವುದಾಗಿ ಕಂದಾಯ ಇಲಾಖೆ ಮಾಹಿತಿ ನೀಡಿದೆ. ಈ ಪೈಕಿ 1,319 ಎಕರೆ ವಕ್ಫ್ ಆಸ್ತಿಯನ್ನು ಕಾನೂನು ಬಾಹಿರವಾಗಿ ಖಾಸಗಿ/ಸಂಘ ಸಂಸ್ಥೆಗಳ ಸ್ವಾಧೀನದಲ್ಲಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಇನ್ನು 26.13 ಎಕರೆ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಆರ್​​ಟಿಸಿಯಲ್ಲಿ ನಮೂದು ಮಾಡಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಗಜೆಟ್ ನೋಟಿಫಿಕೇಷನ್​​ನಂತೆ ಒಟ್ಟು 14,201.32 ಎಕರೆ ವಕ್ಫ್ ಆಸ್ತಿ ಎಂದು ಅಧಿಸೂಚಿಸಲಾಗಿತ್ತು. ಈ ಪೈಕಿ 773 ಎಕರೆ ಯಾವುದೇ ತಕರಾರು, ಒತ್ತುವರಿ ಇಲ್ಲದೆ ವಕ್ಫ್ ಮಂಡಳಿ ಸ್ವಾಧೀನದಲ್ಲಿದೆ. ಇನ್ನು ಇನಾಂ ಅಬಾಲಿಷನ್ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಹಾಗೂ ಭೂ ಸ್ವಾಧೀನ‌ ಕಾಯ್ದೆಯಡಿ ಒಟ್ಟು 12,083.17 ಎಕರೆ ವಕ್ಫ್ ಆಸ್ತಿಯನ್ನು ಖಾಸಗಿ ವ್ಯಕ್ತಿ, ರೈತರಿಗೆ ಮಂಜೂರು ಮಾಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಎಷ್ಟು ಜನರಿಗೆ ನೋಟಿಸ್ ನೀಡಲಾಗಿದೆ?:ವಿಜಯಪುರ ಜಿಲ್ಲೆಯಲ್ಲಿ ಒಟ್ಟು 124 ನೋಟಿಸ್ ನೀಡಲಾಗಿದೆ. ಒಟ್ಟು 433 ಮಂದಿಗೆ ವಕ್ಫ್ ನೋಟಿಸ್ ಹೋಗಿವೆ. ಈ ಪೈಕಿ ವಿಜಯಪುರ ತಾಲೂಕಿನಲ್ಲಿ 7 ಮಂದಿಗೆ, ಬಬಲೇಶ್ವರ ತಾಲೂಕಿನಲ್ಲಿ 38, ಕೊಲ್ಹಾರದಲ್ಲಿ 43, ನಿಡಗುಂದಿಯಲ್ಲಿ 27, ಮುದ್ದೇಬಿಹಾಳದಲ್ಲಿ 87, ತಾಳಿಕೋಟೆಯಲ್ಲಿ 161, ಇಂಡಿಯಲ್ಲಿ 29, ಸಿಂದಗಿಯಲ್ಲಿ 15, ದೇವರಹಿಪ್ಪರಗಿಯಲ್ಲಿ 26 ಜನರಿಗೆ ನೋಟಿಸ್ ನೀಡಲಾಗಿದೆ. ಇಂಡಿ ತಾಲೂಕಿನ 41 ಆಸ್ತಿಗಳಿಗೆ ಆರ್​​ಟಿಸಿ ಕಾಲಂ ನಂ.9ರಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಆದರೆ ಸಂಬಂಧಿತ ವ್ಯಕ್ತಿಗಳಿಗೆ ಯಾವುದೇ ನೋಟಿಸ್ ನೀಡದೆ ವಕ್ಫ್ ಆಸ್ತಿ ಎಂದು ಹೆಸರು ಬದಲಾವಣೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ವಕ್ಫ್ ಆಸ್ತಿಗಳ ಖಾತೆ ಇಂಡೀಕರಣ ಎಷ್ಟು?:ವಿಜಯಪುರದಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 2,148 ವಕ್ಫ್ ಆಸ್ತಿಗಳ ಪೈಕಿ 109 ಆಸ್ತಿಗಳ ಖಾತೆ ಇಂಡೀಕರಣ (ಅಪ್ಡೇಟ್) ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿನ 1,703 ವಕ್ಫ್ ಆಸ್ತಿಗಳ ಪೈಕಿ 691 ಖಾತೆಗಳ ಇಂಡೀಕರಣ ಮಾಡಲಾಗಿದೆ. ಇನ್ನು ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿನ 522 ವಕ್ಫ್ ಆಸ್ತಿಗಳ ಪೈಕಿ 200 ಖಾತೆಗಳ ಇಂಡೀಕರಣ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ರಾಜಕೀಯ ಗುದ್ದಾಟಕ್ಕೆ ಕಾರಣವಾದ ವಕ್ಫ್ ವಿವಾದ: ರಾಜ್ಯದಲ್ಲಿರುವ ಒಟ್ಟು ವಕ್ಫ್ ಆಸ್ತಿ ಎಷ್ಟು? ಒತ್ತುವರಿಯಾಗಿದ್ದೆಷ್ಟು?

ABOUT THE AUTHOR

...view details