ಕರ್ನಾಟಕ

karnataka

ETV Bharat / state

ವಕ್ಫ್ ಆಸ್ತಿ ವಿವಾದ: ಹುಬ್ಬಳ್ಳಿಯಲ್ಲಿ ವಕ್ಫ್ ಬೋರ್ಡ್ ಜೆಪಿಸಿ ಅಧ್ಯಕ್ಷ, ರೈತರಿಗೆ ನ್ಯಾಯ ಕೊಡಿಸುವ ಅಭಯ

ವಕ್ಫ್ ಆಸ್ತಿ ವಿವಾದದ ಬೆನ್ನಲ್ಲೇ ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ರಾಜ್ಯಕ್ಕೆ ನೀಡಿ, ರೈತರ ಮನವಿ ಸ್ವೀಕರಿಸಿದ್ದಾರೆ.

ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿಯ ಅಧ್ಯಕ್ಷರಿಗೆ ರೈತರ ಮನವಿ
ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿಯ ಅಧ್ಯಕ್ಷರಿಗೆ ರೈತರ ಮನವಿ (ETV Bharat)

By ETV Bharat Karnataka Team

Published : Nov 7, 2024, 11:38 AM IST

ಹುಬ್ಬಳ್ಳಿ:ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿದೆ. ಈ ಬೆನ್ನಲ್ಲೇ ಇಂದು ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಹುಬ್ಬಳ್ಳಿಗೆ ಆಗಮಿಸಿ ರೈತರ ಸಮಸ್ಯೆ ಆಲಿಸಿದರು. ಈ ವೇಳೆ ರೈತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದರು.

ನಗರದ ವಿಮಾನ‌ ನಿಲ್ದಾಣದಲ್ಲಿ ಮಾತನಾಡಿದ ಅವರು, ಕರ್ನಾಟಕದ ರೈತರು, ಜನಸಾಮಾನ್ಯರ ಆಸ್ತಿಗಳನ್ನು ವಕ್ಫ್ ಬೋರ್ಡ್ ಕಬಳಿಕೆ ಮಾಡಿದೆ ಎಂದು ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸುಮಾರು 50 ರಿಂದ 60 ವರ್ಷಗಳಿಂದ ಉಳಿಮೆ‌ ಮಾಡಿದ ಜಮೀನು, ದೇವಸ್ಥಾನಗಳನ್ನು ಕಬಳಿಸಲಾಗಿದೆ‌ ಎನ್ನಲಾಗುತ್ತಿದೆ. ಈ ಹಿನ್ನೆಲೆ ಹುಬ್ಬಳ್ಳಿ, ವಿಜಯಪುರ, ಬೀದರ್ ರೈತರ ಹಾಗೂ ಜನರ ಅಹವಾಲು ಸ್ವೀಕರಿಸುತ್ತೇನೆ. ಸದ್ಯ ಹುಬ್ಬಳ್ಳಿಯಲ್ಲಿ ಅದ್ವೈತ್ ಪರಿಷತ್​ ಉತ್ತರ ಕರ್ನಾಟಕ ಹಾಗೂ ರತ್ನ ಭಾರತ ರೈತ ಸಮಾಜದವರು ಮನವಿ ಸಲ್ಲಿಸಿದ್ದಾರೆ‌. ಇದನ್ನು ಸಹ ಪರಿಗಣಿಸಲಾಗುವುದು ಎಂದರು.

ಹುಬ್ಬಳ್ಳಿಯಲ್ಲಿ ರೈತರ ಅಹವಾಲು ಆಲಿಸಿದ ವಕ್ಫ್​ ಬೋರ್ಡ್​ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್​ (ETV Bharat)

ಹುಬ್ಬಳ್ಳಿ ‌ಖಾಸಗಿ ಹೋಟೆಲ್​​ನಲ್ಲಿ ವಕ್ಫ್ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ರೈತ ಸಂಘಟನೆ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಅಹವಾಲು ಸ್ವೀಕರಿಸಿದ ಪಾಲ್ ಅವರು ಪ್ರಾಮಾಣಿಕವಾಗಿ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ವಕ್ಫ್ ಆಸ್ತಿ ವಿವಾದ ಕುರಿತು ವಿಸ್ತೃತ ವರದಿ ಸಿದ್ಧಪಡಿಸಿ ಸಲ್ಲಿಸಲಾಗುವುದು ಎಂದು ಜಗದಾಂಬಿಕಾ ಪಾಲ್ ಹೇಳಿದರು. ಹುಬ್ಬಳ್ಳಿ ಭೇಟಿ ಬಳಿಕ ಪಾಲ್​ ಅವರು ವಿಜಯಪುರಕ್ಕೂ ಭೇಟಿ ನೀಡಿ, ರೈತರ ಸಮಸ್ಯೆಗಳನ್ನು ಆಲಿಸಲಿದ್ದಾರೆ.

ವಿಜಯಪುರದಲ್ಲಿ ಪೊಲೀಸ್ ಬಂದೋಬಸ್ತ್:ವಕ್ಫ್ ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಿಜಯಪುರ ಡಿಸಿ ಕಚೇರಿ ಎದುರು ಬಸನಗೌಡ ಪಾಟೀಲ ಯತ್ನಾಳ್​ ಅವರು ಧರಣಿ ನಡೆಸುತ್ತಿದ್ದಾರೆ. ಇಂದು ವಿಜಯಪುರಕ್ಕೆ ಜೆಪಿಸಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ವಕ್ಫ್ ಸಭೆಗೂ ವಿವಾದಕ್ಕೂ ಸಂಬಂಧವಿಲ್ಲ, ಯಾವ ಮುಸ್ಲಿಂ ರೈತರೂ ಸಭೆಗೆ ಬಂದಿಲ್ಲ: ಸಚಿವ ಜಮೀರ್​

ಪ್ರತಾಪ್ ಸಿಂಹ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಕ್ಫ್ ಬೋರ್ಡ್ ಆಸ್ತಿ ಕಬಳಿಕೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ್​ ಹೋರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕೇಂದ್ರದ ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷರು ಆಗಮಿಸಿದ್ದು, ಜನರ ಅಹವಾಲು ಸ್ವೀಕರಿಸುತ್ತಿದ್ದಾರೆ. ಯತ್ನಾಳ್​ ಅವರ ಹೋರಾಟದಿಂದ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.

ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ತರುವುದು ಕೇಂದ್ರ ಸರ್ಕಾರದ ಮುಂದಿದೆ. ಸಮಿತಿ ಈ ಕಾರ್ಯ ಮಾಡಲಿದೆ. ವಕ್ಫ್ ಮುಖಾಂತರ ರಾಜ್ಯ ಸರ್ಕಾರ ಜನರಿಗೆ ಮಾಡುತ್ತಿರುವ ಮೋಸವನ್ನು ಸರಿಪಡಿಸಲು ಒಂದು ಅವಕಾಶವಿದೆ. ಮುಂದೆ‌ ವಕ್ಫ್ ತಿದ್ದುಪಡಿ ಕಾಯ್ದೆ ಬಂದಾಗ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ದೊರಕಿಸಿಕೊಡಲು ಅವಕಾಶ ಸಿಗಲಿದೆ ಎಂದರು.

ಇದನ್ನೂ ಓದಿ:ವಕ್ಫ್​ ಆಸ್ತಿ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಈವರೆಗೆ ಬಿಡುಗಡೆ ಮಾಡಿದ ಅನುದಾನದ ವಿವರ

ABOUT THE AUTHOR

...view details