ಶಿವಮೊಗ್ಗ: ''ನಾಳೆ ನೀವು ಪ್ರಶ್ನಿಸಲು ಇಂದು ತಪ್ಪದೇ ಎಲ್ಲರೂ ಮತದಾನ ಮಾಡಬೇಕು'' ಎಂದು ನಟ ಶಿವರಾಜ್ ಕುಮಾರ್ ಕರೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ತನ್ನ ಪತ್ನಿ ಗೀತ ಶಿವರಾಜ್ ಕುಮಾರ್ ಅವರ ಜೊತೆ ಮತಯಾಚನೆಗೆ ಆಗಮಿಸಿ, ವಕೀಲರ ಭವನದಲ್ಲಿ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಅವರು, ''ಎಲ್ಲರೂ ಮತದಾನ ಮಾಡಬೇಕು. ನಾನು ಈಗ ಬೆಂಗಳೂರಿಗೆ ಹೋಗಿ ಮತದಾನ ಮಾಡಲಿದ್ದೇವೆ. ನಮ್ಮ ತಂದೆ ಹೇಳುತ್ತಿದ್ದರು, ಎಲ್ಲರೂ ಮತದಾನ ಮಾಡಬೇಕು ಎನ್ನುತ್ತಿದ್ದರು. ಮತದಾನ ನಮ್ಮ ಹಕ್ಕು ಅದನ್ನು ಎಲ್ಲರೂ ಚಲಾಯಿಸಬೇಕು. ಇಂದು ಮತದಾನ ಮಾಡಿ ನಾಳೆ ನಮ್ಮ ಹಕ್ಕನ್ನು ಕೇಳಬಹುದು. ಈ ಹಕ್ಕು ಸಿಗುವುದು ನಾವು ಮತದಾನ ಮಾಡಿದಾಗಲೇ'' ಎಂದು ಅವರು ಹೇಳಿದರು.
''ಮತದಾನ ಮಾಡುವುದನ್ನು ಯಾರು ಮಿಸ್ ಮಾಡಬೇಡಿ. ಎಲ್ಲರೂ ಮತದಾನ ಮಾಡಿ. ನಾನು ಪತ್ನಿ ಧರ್ಮಕ್ಕಾಗಿ ಮತ ಕೇಳಲು ಬಂದಿದ್ದೇನೆ. ಇಂದು ನಾನು ಶಿವಮೊಗ್ಗದ ಜಿಲ್ಲಾ ಕೋರ್ಟ್ನಲ್ಲಿ ವಕೀಲರ ಮತ ಕೇಳಲು ಬಂದಿದ್ದೇವೆ. ನಾನು ನನ್ನ ಪತ್ನಿ ಪರವಾಗಿ, ಮತ ಕೇಳಲು ಬಂದಿದ್ದೇನೆ. ಎಲ್ಲ ವಕೀಲರು ಪ್ರೀತಿ ತೋರಿಸಿದರು. ಸ್ನೇಹ ಪರಸ್ಪರ ಇರುತ್ತದೆ. ಇಲ್ಲಿಗೆ ಬಂದು ನಾನು ನನ್ನ ಪತ್ನಿಗೆ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆ. ಅವರು ಉತ್ತಮವಾಗಿ ಸ್ಪಂದಿಸಿದರು'' ಎಂದರು.