ವಿಜಯಪುರ:ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಹಾಗೂ ಎಸ್ಪಿ ನೇತೃತ್ವದಲ್ಲಿ ಸಮಾಜದ ಮುಖಂಡರೊಂದಿಗೆ ಕೋಮು ಸೌಹಾರ್ದತೆಗಾಗಿ ಶಾಂತಿ ಸಭೆ ನಡೆಯಿತು. ಈ ಸಭೆಯಲ್ಲಿ ಸಮಾಜದ ಮುಖಂಡರ ಬೇಡಿಕೆಗಳನ್ನು ಆಲಿಸಿದ ಅಧಿಕಾರಿಗಳು, ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ವಿಜಯಪುರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಪ್ರಯುಕ್ತವಾಗಿ ಪೂರ್ವಭಾವಿ ಸಭೆ ನಡೆಯಿತು. ಹಿಂದೂ, ಮುಸ್ಲಿಂ ಸಮಾಜದ ಮುಖಂಡರುಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಗಣೇಶ ಮಂಡಳಿಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಬೇಕು. ಗಣೇಶ ಪ್ರತಿಷ್ಠಾಪನೆ, ವಿಸರ್ಜನೆ ಮೆರವಣಿಗೆ ತೆರಳುವ ಮಾರ್ಗ ಸುಧಾರಣೆ ಮಾಡಬೇಕು ಎಂದು ಕಾರ್ಪೊರೇಟರ್ ಶಿವರುದ್ರಪ್ಪ ಬಾಗಲಕೋಟೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು. ಈ ಬಗ್ಗೆ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಬಳಿಕ ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹಸಿರು ಪಟಾಕಿ, ಡಿಜೆ ಸೌಂಡ್ ಬಳಕೆಯ ನಿಷೇಧದ ಬಗ್ಗೆ ಗಣೇಶ ಮಂಡಳಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಶಾಂತಿ ಸೌಹಾರ್ದತೆಯಿಂದ ಗಣೇಶೋತ್ಸವ, ಈದ್ ಮಿಲಾದ್ ಹಬ್ಬಾಚರಣೆ ಮಾಡುವಂತೆ ಸೂಚಿಸಿದರು. ಹಬ್ಬದ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು. ಹಿಂಬಾಗಿಲಿನಿಂದ ಮಾರಾಟಕ್ಕೆ ಕಡಿವಾಣ ಹಾಕಬೇಕು. ಹಾಗೆಯೇ ಬ್ಯಾನರ್ ಅಳವಡಿಕೆಗೆ ಉಚಿತ ಅನುಮತಿ ಕೊಡಬೇಕೆಂದು ಮಂಡಳಿ ಸದಸ್ಯರು ಆಗ್ರಹಿಸಿದರು.