ಕರ್ನಾಟಕ

karnataka

ETV Bharat / state

ವಿಜಯಪುರ ಲಿಂಬೆಗೆ ಭಾರೀ ಬೇಡಿಕೆ: ಭರ್ಜರಿ ಆದಾಯ ಗಳಿಸುತ್ತಿರುವ ರೈತರು - Lemon Nursery - LEMON NURSERY

ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಸಸಿಗಳಿಗೆ ಭಾರೀ ಬೇಡಿಕೆ ಬಂದಿದೆ. ರೈತರ ಲಿಂಬೆ ಕೃಷಿ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಲಿಂಬೆಗೆ ಜಿಐ ಟ್ಯಾಗ್
ವಿಜಯಪುರ ಜಿಲ್ಲೆಯ ಲಿಂಬೆಗೆ ಜಿಐ ಟ್ಯಾಗ್ (ETV Bharat)

By ETV Bharat Karnataka Team

Published : Sep 15, 2024, 12:55 PM IST

ವಿಜಯಪುರ ಲಿಂಬೆಗೆ ಭಾರೀ ಬೇಡಿಕೆ: ಭರ್ಜರಿ ಆದಾಯ ಗಳಿಸುತ್ತಿರುವ ರೈತರು (ETV Bharat)

ವಿಜಯಪುರ: ಈ ಜಿಲ್ಲೆ ಲಿಂಬೆ ಕಣಜ ಅಂತಲೇ ಪ್ರಸಿದ್ಧಿ. ಇಲ್ಲಿಯ ಲಿಂಬೆಗೆ ಈಗಾಗಲೇ ಜಿಯೋಗ್ರಾಫಿಕಲ್​ ಇಂಡಿಕೇಷನ್​​(ಜಿಐ)ಟ್ಯಾಗ್​​ ದೊರೆತಿದೆ. ಜಿಐ ಟ್ಯಾಗ್​ ಹಾಗೂ ಲಿಂಬೆ ಅಭಿವೃದ್ಧಿ ಮಂಡಳಿಯಿಂದ ಈವರೆಗೆ ಲಿಂಬೆ ಬೆಳೆಗಾರರಿಗೆ ಮಾತ್ರ ಯಾವುದೇ ಉಪಯೋಗ ಆಗಿಲ್ಲ. ಆದರೂ ಕೂಡ ರೈತರು ಸ್ವತಃ ಲಿಂಬೆ ಕೃಷಿಯಿಂದ ಭರ್ಜರಿ ಲಾಭ ಪಡೆಯುತ್ತಿದ್ದಾರೆ.

ಲಕ್ಷ ಲಕ್ಷ ಆದಾಯ: ವಿಜಯಪುರ ಜಿಲ್ಲೆ ಹಲವಾರು ರೀತಿಯ ವಾಣಿಜ್ಯ ಬೆಳೆಗಳಿಗೆ ಹೆಸರುವಾಸಿ. ಅದರಲ್ಲಿ ದ್ರಾಕ್ಷಿ, ಲಿಂಬೆ ಪ್ರಮುಖವಾದವು. ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆ ಬೆಳೆದರೆ, ಅದರಲ್ಲಿ ಇಂಡಿ ತಾಲೂಕಿನಲ್ಲೇ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆ ಬೆಳೆಯುತ್ತಾರೆ‌. ತಾಂಬಾ ಗ್ರಾಮದ ಲಿಂಬೆ ಬೆಳೆಗಾರ ಬೀರಪ್ಪ ವಗ್ಗಿ ತಮ್ಮ 14 ಎಕರೆ ಪ್ರದೇಶದಲ್ಲಿ ಲಿಂಬೆ ಬೆಳೆದು, 4 ಎಕರೆಯಲ್ಲಿ ಲಿಂಬೆ ಸಸಿಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಭರ್ಜರಿ ಆದಾಯ ಗಳಿಸಿದ್ದಾರೆ.

ಲಿಂಬೆ ಸಸಿಗೆ ಭಾರೀ ಬೇಡಿಕೆ: ಇನ್ನು ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ರೈತರು ಜಿಲ್ಲೆಗೆ ಆಗಮಿಸಿ ಲಿಂಬೆ ಸಸಿಗಳನ್ನು ಖರಿದೀಸುತ್ತಿದ್ದಾರೆ. ಮಹಾರಾಷ್ಟ್ರದ ಉಸ್ಮಾನಾಬಾದ್ ಮತ್ತು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಜಿಲ್ಲೆಗಳಿಂದ ಸಸಿಗಳನ್ನು ಖರೀದಿಸಲು ಜಿಲ್ಲೆಯ ನರ್ಸರಿಗಳಿಗೆ ಬರಲಾರಂಭಿಸಿದ್ದಾರೆ. ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಜಿಲ್ಲೆಯ ಅದರಲ್ಲೂ ಇಂಡಿ ತಾಲೂಕಿನ ಹಲವಾರು ರೈತರು ತಮ್ಮ ಜಮೀನಿನ ಹೆಚ್ಚಿನ ಭಾಗವನ್ನು ನಿಂಬೆ ನರ್ಸರಿಗೆ ಮೀಸಲಿಟ್ಟಿದ್ದಾರೆ.

ಇಂಡಿ ತಾಲೂಕಿನಲ್ಲಿ ಕೆಲ ರೈತರು ಲಿಂಬೆ ಬೆಳೆ ಜೊತೆ 1 ರಿಂದ 2 ಎಕರೆ ಜಮೀನು ಮೀಸಲಿಟ್ಟು, ನರ್ಸ್​ರಿಯಲ್ಲಿ ನಿರತರಾಗಿದ್ದಾರೆ. ಪೋಷಕಾಂಶವುಳ್ಳ ಗೊಬ್ಬರ ಬಳಸಿ, ಮಣ್ಣು ಹದ ಮಾಡುತ್ತಾರೆ. ಸಸಿ ಹೊರ ತೆಗೆಯುವಾಗ ಬೇರು ಕತ್ತರಿಸದಂತೆ ಮುಂಜಾಗ್ರತೆ ವಹಿಸುತ್ತಾರೆ. ಗುಣಮಟ್ಟದ ಸಸಿಗಳನ್ನು ಬೆಳೆಸಿ ಉತ್ತಮ ಬೆಲೆಗೆ ಮಾರುತ್ತಾರೆ. ಕೆಲ ರೈತರು ಒಂದು ವರ್ಷದ ಸಸಿಗೆ 13 ರೂ, ಎರಡು ವರ್ಷದ ಸಸಿಗೆ 25 ರೂ, ಅದಕ್ಕಿಂತ ಜಾಸ್ತಿ ದೊಡ್ಡ ಸಸಿಗಳಿದ್ದರೆ 100 ರೂನಂತೆ ಮಾರಾಟ ಮಾಡುತ್ತಿದ್ದಾರೆ.

ಖಾಗ್ಜಿ ತಳಿಯ ಲಿಂಬೆಗೆ ಭಾರೀ ಬೇಡಿಕೆಯಿದೆ. ಇದಕ್ಕೆ ಜಿಐ ಟ್ಯಾಗ್​ ದೊರೆತಿದೆ. ಲಿಂಬೆ ಸಸಿಗಳಿಗೂ ಬೇಡಿಕೆ ಇದೆ. ಲಿಂಬೆ ಅಭಿವೃದ್ಧಿ ಮಂಡಳಿ ಮತ್ತು ಜಿಐ ಟ್ಯಾಗ್​ನಿಂದ ಮಾತ್ರ ರೈತರಿಗೆ ಉಪಯೋಗ ಏನು ಎಂಬುದು ತಿಳಿಯುತ್ತಿಲ್ಲ. ಲಿಂಬೆ ಬೆಳೆಗಾರರಿಗೆ ಸೂಕ್ತ ಸಹಾಯಧನ ನೀಡಬೇಕೆಂದು ಎಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ.

ವಸ್ತು ಅಥವಾ ಉತ್ಪನ್ನವೊಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿದ್ದು ಅಥವಾ ಅಲ್ಲಿ ಹುಟ್ಟಿಕೊಂಡಿರುವುದು ಎಂಬುದನ್ನು ಸೂಚಿಸುವುದಕ್ಕಾಗಿ ನೀಡುವ ಗುರುತೇ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಅಥವಾ ಜಿಐ ಟ್ಯಾಗ್. ನಿರ್ದಿಷ್ಟ ವಸ್ತುವಿನ ಗುಣಮಟ್ಟ, ಖ್ಯಾತಿ ಅಥವಾ ಇತರ ಗುಣಲಕ್ಷಣಗಳನ್ನು ಗುರುತಿಸಲು ಜಿಐ ಟ್ಯಾಗ್ ಮಾನದಂಡವಾಗಿ ನೆರವಾಗುತ್ತೆ.

ಇದನ್ನೂ ಓದಿ:ಬರದ ನಾಡಲ್ಲಿ ಡ್ರ್ಯಾಗನ್‌ಫ್ರೂಟ್​ ಬೆಳೆದ ಫಾರ್ಮಾಸಿಸ್ಟ್‌; ಕೈತುಂಬಾ ಆದಾಯ ನೀಡುತ್ತಿರುವ ಹಣ್ಣಿನ ಬೆಳೆ - DRAGON FRUIT

ABOUT THE AUTHOR

...view details