ಬೆಂಗಳೂರು: ಸರಿಯಾದ ದಾರಿಯಲ್ಲಿ ನಡೆಯುವುದೇ ಸಂತೋಷಕ್ಕೆ ರಹದಾರಿಯಾಗಿದೆ. ಅದೇ ಧರ್ಮವಾಗಿದೆ. ಇದನ್ನೇ ನಮ್ಮ ನೆಲೆದಲ್ಲಿ ಹುಟ್ಟಿದ್ದ ಹಾಗೂ ಈಗಲೂ ಬದುಕುತ್ತಿರುವ ಸಾಧು - ಸಂತರು ಹಲವು ರೀತಿಯಲ್ಲಿ ನಮಗೆ ಹೇಳಿದ್ದಾರೆ. ಸತ್ಯದ ದಾರಿಯಲ್ಲಿ ಸಂಪತ್ತು, ಜ್ಞಾನವನ್ನು ಪಡೆಯುವುದು ನಮ್ಮ ಸಂಸ್ಕೃತಿಯ ಭಾಗವೆಂದು ಶಂಕರಾಚಾರ್ಯರಾದಿಯಾಗಿ ಮಹಾಪುರುಷರು ತೋರಿಸಿಕೊಟ್ಟಿದ್ದಾರೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿದ್ದ ಶೃಂಗೇರಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಜಿ ಅವರ ಸನ್ಯಾಸ ಸ್ವೀಕಾರವಾಗಿ 50 ವರ್ಷ ತುಂಬಿದ ಹಿನ್ನೆಲೆ ಕಲ್ಯಾಣ ಕಾರ್ಯಕ್ರಮ ಮತ್ತು ನಮಃ ಶಿವಾಯ ಸ್ತೋತ್ರ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ಮಾರ್ಗದಲ್ಲಿ ಜೀವನ ಸಾಗಿಸುವುದೇ ನಿಜವಾದ ಧರ್ಮವಾಗಿದೆ. ಸಮಾನತೆಯ ಧರ್ಮವಾಗಿದೆ. ಅದನ್ನು ತಿರುಚುವ ಮತ್ತು ದಾರಿ ತಪ್ಪಿಸುವ ಕೆಲಸಗಳನ್ನು ಸಹ ಶತಮಾನಗಳ ಕಾಲದಿಂದ ಹೊರಗಿನ ಶಕ್ತಿಗಳು ಮಾಡುತ್ತಾ ಬಂದವು. ಅದರೆ ನಮ್ಮ ಸನಾತನ ಧರ್ಮದಲ್ಲಿರುವ ಸತ್ಯ ಅದನ್ನು ಯಶಸ್ವಿಯಾಗಿ ಮೆಟ್ಟಿನಿಂತು ಮತ್ತೆ ವಿಶ್ವಗುರುವಾಗುವತ್ತ ಹೊರಟಿದೆ ಎಂದರು.
ಶೃಂಗೇರಿ ಶಂಕರ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಆದಿ ಶಂಕರಾಚಾರ್ಯರ ಶಿಷ್ಯ ಪರಂಪರೆ ಉತ್ಕೃಷ್ಠವಾಗಿದೆ. ಅದನ್ನು ಈಗಿನ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿಗಳು ಸಹ ಮುಂದುವರಿಸಿಕೊಂಡು ಬಂದಿದ್ದಾರೆ. ಇಂತಹ ಪರಮಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲು ಆವಕಾಶ ಸಿಕ್ಕಿದ್ದು ಮರೆಯಲಾಗದ ಅನುಭವವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.