ಹುಬ್ಬಳ್ಳಿ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಂಗೊಳಿಸುತ್ತಿರುವ ಮುಂಗಾರು ಹಂಗಾಮಿನ ಬೆಳೆಗಳಿಗೆ ಕೀಟ ಹಾಗೂ ರೋಗ ಬಾಧೆ ಆವರಿಸುತ್ತಿದ್ದು, ಇಳುವರಿ ಕುಂಠಿತಗೊಳ್ಳುವ ಭೀತಿ ಎದುರಾಗಿದೆ. ಕಳೆದ ವರ್ಷ ಧಾರವಾಡ ತಾಲೂಕಿನಲ್ಲಿ ಸೋಯಾಬೀನ್, ಹೆಸರು, ಉದ್ದು ಬಿತ್ತನೆ ಮಾಡಿದ್ದ ರೈತರು, ಆರಂಭದಲ್ಲಿ ಉತ್ತಮ ಮಳೆಯಾಗಿ ನಂತರ ಕೊರತೆಯ ಪರಿಣಾಮ ಹಸಿರು ಬರ ಆವರಿಸಿದ್ದರಿಂದ ಕೈ ಸುಟ್ಟುಕೊಂಡಿದ್ದರು.
ಈ ಬಾರಿ ಮುಂಗಾರು ಅತ್ಯುತ್ತಮವಾಗಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಹೆಸರು, ಉದ್ದು ಮತ್ತು ಸೋಯಾಬೀನ್ ಬಿತ್ತನೆ ಮಾಡಲಾಗಿದೆ. ಅದರಲ್ಲೂ ಕುಂದಗೋಳ ತಾಲೂಕಿನಲ್ಲಿ 50 ಸಾವಿರ ಹೆಕ್ಟೇರ್ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 49 ಸಾವಿರ ಹೆಕ್ಟೇರ್ ಅಂದರೆ ಶೇ 99 ರಷ್ಟು ಬಿತ್ತನೆಯಾಗಿದ್ದು, ಅದರಲ್ಲೂ 13 ಸಾವಿರ ಹೆಕ್ಟೇರ್ನಲ್ಲಿ ಹೆಸರು ಬಿತ್ತಲಾಗಿದೆ. ಇದಲ್ಲದೆ ಸೋಯಾಬೀನ್, ಉದ್ದಿನ ಬೆಳೆ ಹುಲುಸಾಗಿ ಬೆಳೆದಿದ್ದರೂ ಬೆಳೆಗಳಿಗೆ ತುಕ್ಕು (ತಾಮ್ರ) ರೋಗ ಕಾಣಿಸಿಕೊಂಡಿದೆ.
ಎಲೆಗಳ ಕೆಳಭಾಗದಲ್ಲಿ ಕಂದು ಬಣ್ಣದ ಚುಕ್ಕೆಯ ಲಕ್ಷಣಗಳು ಕಂಡು ಬಂದಿದ್ದು, ನಂತರ ಎಲೆಯ ಎಲ್ಲ ಭಾಗ ಆವರಿಸಿ ಸುಟ್ಟಂತಾಗುತ್ತಿವೆ. ಅದರ ಜೊತೆಗೆ ಕೀಟಗಳ ಬಾಧೆ ಕಾಡುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆ. ಸಾಲ ಶೂಲ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಕುಂದಗೋಳ ಭಾಗದ ರೈತರು ಕಂಗಾಲಾಗಿದ್ದಾರೆ. ಅತೀವೃಷ್ಟಿಯಿಂದ ಬೆಳೆ ಹಾನಿಯಾಗಿರುವುದಲ್ಲದೇ ರೋಗ ಹಾಗೂ ಕೀಟ ಬಾಧೆಯಿಂದಾದ ಹಾನಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಬಸವರಾಜ್ ಯೋಗಪ್ಪನರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.