ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿ ನಿಗಮದ 94.73 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಎಂ.ಜಿ.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯ ಡೆಪ್ಯೂಟಿ ಮ್ಯಾನೇಜರ್ ಆಗಿರುವ ದೀಪಾ.ಡಿ ಅವರ ಮನೆಯನ್ನ ಸಿಬಿಐ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಇತ್ತ ಇ.ಡಿ. ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಅವರ ಆಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಹುಕೋಟಿ ವಂಚನೆ ಸಂಬಂಧ ರಾಜ್ಯ ಎಸ್ಐಟಿ ತಂಡವು ತನಿಖೆ ನಡೆಸಿ 11 ಮಂದಿಯನ್ನ ಬಂಧಿಸಿ 30 ಕೋಟಿ ರೂಪಾಯಿಗಿಂತ ಹೆಚ್ಚು ಹಣ ವಶಕ್ಕೆ ಪಡೆದುಕೊಂಡಿದೆ. ಮತ್ತೊಂದೆಡೆ ಸಿಬಿಐ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ವಾಲ್ಮೀಕಿ ಆಭಿವೃದ್ಧಿ ನಿಗಮಕ್ಕೆ ಸೇರಿದ ಬಹುಕೋಟಿ ದುರ್ಬಳಕೆ ಸಂಬಂಧ ಬ್ಯಾಂಕ್ ಅಧಿಕಾರಿಗಳೇ ಹಗರಣದಲ್ಲಿ ಶಾಮೀಲಾಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ.
ಈ ಬಗ್ಗೆ ಸಿಬಿಐ, ಇ.ಡಿ.ಗೂ ಪತ್ರ ಬರೆದಿತ್ತು. ಕಳೆದ ಮೂರು ದಿನಗಳ ಹಿಂದೆ ಹಣದ ವಹಿವಾಟಿನ ಬಗ್ಗೆ ಇ.ಡಿ. ಅಧಿಕಾರಿಗಳು ಎಂ.ಜಿ. ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಗೆ ಬಂದು ಪರಿಶೀಲಿಸಿದ್ದರು. ಹಗರಣದಲ್ಲಿ ಬ್ಯಾಂಕ್ನ ಶಾಖೆಯ ಡೆಪ್ಯೂಟಿ ಮ್ಯಾನೇಜರ್ ದೀಪಾ ಅವರ ಕೈವಾಡ ಇರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವಿಜಯನಗರದಲ್ಲಿರುವ ಆಕೆಯ ಮನೆಗೆ ಹೋಗಿದ್ದಾಗ ದೀಪಾ ನಾಪತ್ತೆ ಆಗಿರುವುದು ಗೊತ್ತಾಗಿತ್ತು. ಹೀಗಾಗಿ ಅವರ ಮನೆಯನ್ನ ಸೀಲ್ ಮಾಡಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.