ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾಗೇಂದ್ರ ಸೇರಿದಂತೆ ಇತರ ಆರೋಪಿಗಳ ಪಾತ್ರ ಹಾಗೂ ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಣದ ದುರ್ಬಳಕೆ ಕುರಿತಂತೆ ತನಿಖಾ ವರದಿಯನ್ನ ಅಧಿಕಾರಿಗಳು ಸಲ್ಲಿಸಿದ್ದು, ನ್ಯಾಯಾಲಯದಿಂದ ಸ್ವೀಕೃತವಾಗಿರುವುದಾಗಿ ಪ್ರಕಟಣೆಯಲ್ಲಿ ಇ.ಡಿ. ತಿಳಿಸಿದೆ.
ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಮಾಜಿ ಸಚಿವ ನಾಗೇಂದ್ರಗೆ ಹೈದರಾಬಾದ್ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ್, ಬ್ಯಾಂಕ್ ಅಧ್ಯಕ್ಷ ಇಟಕಾರಿ ಸತ್ಯನಾರಾಯಣ, ವಾಲ್ಮೀಕಿ ನಿಗಮದ ಎಂ.ಡಿ. ಜೆ.ಜಿ. ಪದ್ಮನಾಭ, ಸಹಚರರಾದ ನಾಗೇಶ್ವರ ರಾವ್, ನೆಕ್ಕುಂಟಿ ನಾಗರಾಜ್ ಹಾಗೂ ವಿಜಯ್ ಕುಮಾರ್ ಗೌಡ ಸೇರಿದಂತೆ 24 ಮಂದಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಅವ್ಯವಹಾರ ಸಂಬಂಧ ಎಸ್ಐಟಿ ಹಾಗೂ ಸಿಬಿಐ ಪರ್ಯಾಯವಾಗಿ ತನಿಖೆ ನಡೆಸುತ್ತಿವೆ. ಪತ್ತೆ ಹಚ್ಚಲಾದ 89.62 ಕೋಟಿ ಹಣವನ್ನ ಆಂಧ್ರ ಹಾಗೂ ತೆಲಂಗಾಣದ ವಿವಿಧ ಬ್ಯಾಂಕ್ಗಳಲ್ಲಿ ನಕಲಿ ಖಾತೆಗಳಿಗೆ ವರ್ಗವಾಗಿರುವುದು ತಿಳಿದುಬಂದಿದೆ. ನಗರದ ಎಂ.ಜಿ. ರೋಡ್ನಲ್ಲಿರುವ ಯೂನಿಯನ್ ಬ್ಯಾಂಕ್ನಿಂದ ವರ್ಗಾವಣೆಯಾಗಿದ್ದ 187 ಕೋಟಿ ರೂ.ಹಣದಲ್ಲಿ 43.33 ಕೋಟಿ ಹಣವನ್ನ ರಾಜ್ಯದ ಗಂಗಾ ಕಲ್ಯಾಣ ಯೋಜನೆಗೆ ಮೀಸಲಿರಿಸಲಾಗಿತ್ತು. ಸರ್ಕಾರದ ನಿರ್ದೇಶನವನ್ನ ಗಾಳಿಗೆ ತೂರಿ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ನಗದಾಗಿ ಪರಿವರ್ತಿಸಿಕೊಂಡಿದ್ದರು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2024ರ ಬಳ್ಳಾರಿ ಲೋಕಸಭಾ ಚುನಾವಣೆ ವೆಚ್ಚಕ್ಕಾಗಿ ವಾಲ್ಮೀಕಿ ನಿಗಮದ 20.19 ಕೋಟಿ ರೂಪಾಯಿ ಹಣವನ್ನು ನಾಗೇಂದ್ರ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣಾ ಖರ್ಚಿನ ಜೊತೆಗೆ ವೈಯಕ್ತಿಕ ಬಳಕೆಗೆ ವಿನಿಯೋಗಿಸಿಕೊಂಡಿದ್ದಾರೆ. ಮಾಜಿ ಸಚಿವರ ಮನೆ ಮೇಲೆ ನಡೆಸಿದ ದಾಳಿ ವೇಳೆ ಕೆಲ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ನಾಗೇಂದ್ರ ಆಪ್ತ ವಿಜಯ್ ಕುಮಾರ್ ಮೊಬೈಲ್ ಫೋನ್ ವಶಕ್ಕೆ ಪಡೆದು ರಿಟ್ರೀವ್ ಮಾಡಿದಾಗ ಹಣ ಹಂಚಿಕೆ ಅವ್ಯವಹಾರ ಕಂಡುಬಂದಿದೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ನಾಗೇಂದ್ರ ಮೊಬೈಲ್ ನಾಶ ಪಡಿಸುವುದಲ್ಲದೆ ಇನ್ನಿತರ ಆರೋಪಿಗಳಿಗೆ ಕೃತ್ಯದ ಬಗ್ಗೆ ಬಾಯ್ಬಿಡದಂತೆ ಬೆದರಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.