ಕಾರವಾರ: ಮೂರು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಟಫ್ ಫೈಟ್ ನೀಡಿದೆ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ನಿಂದ ಡಾ.ಅಂಜಲಿ ನಿಂಬಾಳ್ಕರ್ ಕಣದಲ್ಲಿದ್ದಾರೆ. ಪ್ರಬುದ್ಧ ಮತದಾರರಿರುವ ಈ ಕ್ಷೇತ್ರದಲ್ಲಿ ಈ ಬಾರಿ ವಿಶ್ಲೇಷಣೆ ಕಷ್ಟಸಾಧ್ಯವಾಗುವಷ್ಟರ ಮಟ್ಟಿಗೆ ಹಣಾಹಣಿ ಇದೆ. ಅಳೆದು ತೂಗಿದರೂ ಜನರು ಮತ್ತು ಕಾರ್ಯಕರ್ತರಿಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಹೀಗಾಗಿ, ಜೂನ್ 4ರ ಫಲಿತಾಂಶದ ಮೇಲೆ ಕುತೂಹಲ ಹೆಚ್ಚಾಗಿದೆ.
ಮೇ 7ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದ ಇತಿಹಾಸದಲ್ಲಿಯೇ ಗರಿಷ್ಠ ಶೇ.76.53ರಷ್ಟು ಮತದಾನ ದಾಖಲಾಗಿದೆ. ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿ ಗೋಚರಿಸುತ್ತಿದೆ. ಕಾಂಗ್ರೆಸ್ ಹುರಿಯಾಳು ಡಾ.ಅಂಜಲಿ ನಿಂಬಾಳ್ಕರ್ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮೂರು ದಶಕಗಳ ಬಳಿಕ ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಇಡಲು ಕ್ಷೇತ್ರದಾದ್ಯಂತ ಭಾರೀ ಪ್ರಚಾರ ಕೈಗೊಂಡಿದ್ದರು.
ಮರಾಠಿ ಸಮುದಾಯದ ಬೆಂಬಲ: ಖಾನಾಪುರದ ಮೂಲದ ಅಂಜಲಿ ನಿಂಬಾಳ್ಕರ್ ಮರಾಠಿ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಇದೇ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಇವರಿಗೆ ಪ್ಲಸ್. ಪ್ರತೀ ಬಾರಿ ಬಿಜೆಪಿ ಪರ ಈ ಮತಗಳು ವಾಲುತ್ತಿದ್ದವು. ಆದರೆ ಈ ಬಾರಿ ಸಮುದಾಯದ ಅಭ್ಯರ್ಥಿಗೆ ಬೆಂಬಲಿಸಲಿವೆ ಎಂಬುದೊಂದು ವಿಶ್ಲೇಷಣೆ.
ಅಲ್ಲದೇ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಪೈಕಿ 5ರಲ್ಲಿರುವ ಕಾಂಗ್ರೆಸ್ ಶಾಸಕರು ಲೀಡ್ ತರಬಹುದು. ಸಚಿವರು, ಮಾಜಿ ಶಾಸಕರ, ಮುಖಂಡರ ಬೆಂಬಲ, ಗ್ಯಾರಂಟಿ ಯೋಜನೆಗಳ ಬಲ ಕಾಂಗ್ರೆಸ್ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ಡಾ.ಅಂಜಲಿ ನಿಂಬಾಳ್ಕರ್ ಈ ಹಿಂದೆ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 36,649 ಮತಗಳ ಅಂತರದಿಂದ ಜಯಿಸಿದ್ದರು. ಆದರೆ 2023ರಲ್ಲಿ ಸೋಲು ಕಂಡಿದ್ದಾರೆ.
ಅನಂತಕುಮಾರ್ ಹೆಗಡೆ ಅಸಮಾಧಾನದ ಎಫೆಕ್ಟ್ ಏನು?:ಇನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಹೈಕಮಾಂಡ್ ಅಚ್ಚರಿಯ ಘೋಷಣೆಯೊಂದಿಗೆ ಮೊದಲ ಬಾರಿಗೆ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಸತತ ಗೆಲುವು ಸಾಧಿಸುತ್ತಿದ್ದರೂ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಈ ಬಾರಿ ಹೈಕಮಾಂಡ್ ಕೈಬಿಟ್ಟು, ಕಾಂಗೇರಿ ಅವರಿಗೆ ಅವಕಾಶ ನೀಡಿದೆ. ಬಹಿರಂಗವಾಗಿ ಅನಂತಕುಮಾರ್ ಹೆಗಡೆ ಪ್ರಚಾರಕ್ಕೆ ಬರದೇ ಅಸಮಾಧಾನ ತೋರಿರುವುದು ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಿದೆ.