ಹುಬ್ಬಳ್ಳಿ:"ರಾಹುಲ್ ಗಾಂಧಿಗೆ ಸೋಲಿನ ಕನಸುಗಳು ಬೀಳ್ತಿವೆ. ಕಾಂಗ್ರೆಸ್ನವರಿಗೆ ನಾವು ಸೋಲ್ತೀವಿ, ಕಳೆದ ಬಾರಿಗಿಂತಲೂ ಕಡಿಮೆ ಸೀಟ್‌ಗಳನ್ನು ಪಡೀತೀವಿ ಅನ್ನೋದು ಅರ್ಥವಾಗಿದೆ. ಹೀಗಾಗಿ ಇವಿಎಂ ಮೇಲೆ ಅನುಮಾನಪಡುತ್ತಿದ್ದಾರೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಇಂದು ಮಾತನಾಡಿದ ಅವರು, "ಮಮತಾ ಬ್ಯಾನರ್ಜಿ ಕೂಡಾ ಕೇವಲ 40 ಸೀಟ್ ಗೆಲ್ತೀವಿ ಅಂತಾ ಹೇಳ್ತಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಮತ್ತು ಇವಿಎಂ ಮೇಲೆ ಅವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ದುರಂತ. ಅವರಿಗೆ ಕರ್ನಾಟಕದಲ್ಲಿ ಗೆದ್ದರೆ ಇವಿಎಂ ಪ್ರಾಬ್ಲಮ್ ಇಲ್ಲ. ನಾವು ಗೆದ್ದರೆ ಇವಿಎಂ ಸಮಸ್ಯೆಯಾಗುತ್ತದೆ. ಆದರೆ ನಾವು ಸೋತರೂ ಇವಿಎಂ ಬಗ್ಗೆ ತಕರಾರು ತೆಗೆದಿಲ್ಲ" ಎಂದರು.