ಪ್ರಲ್ಹಾದ್ ಜೋಶಿ (ETV Bharat) ಹುಬ್ಬಳ್ಳಿ:ರಾಜಭವನ ಚಲೋ ಬದಲಿಗೆ ಕಾಂಗ್ರೆಸ್‌ನವರು ತಪ್ಪಾಯ್ತು ಅಂತ ಮುಡಾಕ್ಕೆ ಕೈಮುಗಿದು ಮುಡಾ ಚಲೋ ಮಾಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರ ಮೇಲೆ ಯಾವುದೇ ಕಾಳಜಿ ಇಲ್ಲದ ರಾಜ್ಯ ಸರ್ಕಾರ ರಾಜಕೀಯದಲ್ಲಿ ತೊಡಗಿದೆ ಎಂದು ಟೀಕಿಸಿದರು.
''ಜನರು ಕಲ್ಯಾಣಕ್ಕಾಗಿ 136 ಸೀಟ್ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕರು ಮಾತ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ನೀವು ಯಾಕೆ ರಾಜಭವನ ಚಲೋ ಮಾಡಿತ್ತೀರಿ, ಮುಡಾ ಚಲೋ ಮಾಡಿ, ಅಲ್ಲಿ ಹೋಗಿ ಕೈಮುಗಿದು ನಂದು ತಪ್ಪಾಗಿದೆ ಎಂದು ಹೇಳಿ. ರಾಜಭವನ ಚಲೋ ಅಕ್ಷಮ್ಯ ಅಪರಾಧ'' ಎಂದು ಹೇಳಿದರು.
''ತನಿಖೆಗೆ ಸಿಎಂ ಯಾಕೆ ಹೆದರುತ್ತಿದ್ದಾರೆ. ಸಿದ್ದರಾಮಯ್ಯ ನಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ. ಈಗ ಯಾಕೆ ರಾಜ್ಯಪಾಲರನ್ನು ಹೆದರಿಸೋ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಹೆದರಿಕೆ, ಬೆದರಿಕೆಗೆ ಯಾರೂ ಬಗ್ಗಲ್ಲ. ರಾಜ್ಯಪಾಲರು ದಲಿತರು, ಅವರ ಬಗ್ಗೆ ನೀವು ಮಾತನಾಡಿದ್ದೀರಿ. ರಾಜ್ಯಪಾಲರು ತನಿಖೆ ಮಾಡಿ ಅಂತಾ ಹೇಳಿದ್ದಾರೆ. ನಿಮಗೂ ಕೇಜ್ರಿವಾಲ್ ತರಹ ನಾಚಿಕೆ ಮಾನ ಮರ್ಯಾದೆ ಇಲ್ಲ ಅನಿಸುತ್ತೆ. ಮುಖ್ಯಮಂತ್ರಿಗಳಿಗೆ ಮತ್ತು ಪಟಾಲಂಗೆ ಅಧಿಕಾರ ಮುಖ್ಯ. ರಾಹುಲ್ ಗಾಂಧಿ ಅವರು ಏನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಏನು ನಡಿಯುತ್ತಿದೆ ನೋಡಿ. ಮುಡಾದಲ್ಲಿ ಸೈಟ್ ನಿಮ್ಮದಲ್ಲ. ನೀವು ಭ್ರಷ್ಟಾಚಾರ ಮಾಡಿದವರಿಗೆ ಪ್ರಮೋಷನ್ ಕೊಟ್ಟಿದೀರಿ. ಮುಡಾ ಮಾಜಿ ಆಯುಕ್ತರನ್ನು ಕುಲಸಚಿವರನ್ನಾಗಿ ಮಾಡಿದ್ದಾರೆ. ತನಿಖೆ ನಡೆಯುವಾಗ ಅಧಿಕಾರದಲ್ಲಿ ಇರಬೇಕು ಅನ್ನೋ ನಿರ್ಲಜ್ಜತನ ಇದ್ದರೆ, ಅದು ನಿಮಗೆ ಬಿಟ್ಟಿದ್ದು'' ಎಂದು ವಾಗ್ದಾಳಿ ನಡೆಸಿದರು.
''ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಲಿ ಅಂತ ಕೆಲವರು ಕಾಯುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಕೆಲವೊಬ್ಬರು ವಿಷಯ ಡೈವರ್ಟಿಂಗ್ ಡ್ರಾಮಾ ಮಾಡುತ್ತಿದ್ದಾರೆ. ತಪ್ಪು ಮಾಡಿಲ್ಲ ಅನ್ನೋದಾದರೆ ಇಷ್ಟೆಕ್ಕೆ ಡ್ರಾಮಾ ಮಾಡಬೇಕು?.
50ರ ಅನುಪಾತದಲ್ಲಿ ಸೈಟ್ ಕೊಡೋಕೆ ಅವಕಾಶ ಇಲ್ಲ ಎಂಬ ನಗರಾಭಿವೃದ್ಧಿ ಇಲಾಖೆ ಆದೇಶ ಇದೆ. ಸಂತೋಷ್ ಲಾಡ್ ಅವರು ದಾಖಲೆ ಯಾಕೆ ತಗೆದುಕೊಂಡರು ಅಂತಾ ಕೇಳುತ್ತಾರೆ?. ಲಾಡ್ ಹೇಳಿಕೆ ಚೈಲ್ಡಿಶ್. ಸಂತೋಷ್ ಲಾಡ್ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ'' ಎಂದು ಟೀಕಿಸಿದರು.
ಇದನ್ನೂ ಓದಿ:'ರಾಜಭವನ ರಾಜಕೀಯ ಭವನ ಆಗಬಾರದು': ಎನ್ಡಿಎ ನಾಯಕರ ಪ್ರಾಸಿಕ್ಯೂಷನ್ ಅನುಮತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ - Congress appeals to governor