ಹುಬ್ಬಳ್ಳಿ:ವಿದೇಶದಲ್ಲಿ ರಾಹುಲ್ ಗಾಂಧಿ ಅಪ್ರಬುದ್ಧ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದರು.
ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕೈಯಲ್ಲಿ ಸಂವಿಧಾನ ಪುಸ್ತಕ ಹಿಡೀತಾರೆ, ಮನಸ್ಸಿನಲ್ಲಿ ಸಂವಿಧಾನ, ಮೀಸಲಾತಿ ವಿರೋಧಿ ನಿಲುವು ಇಟ್ಟುಕೊಂಡಿದ್ದಾರೆ. ವಿದೇಶದಲ್ಲಿ ನೀಡಿದ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದರು.
ಕಾಂಗ್ರೆಸ್ ನಾಯಕರು ಎಂದೆಂದಿಗೂ ಮೀಸಲಾತಿ ವಿರೋಧಿಗಳು. ರಾಹುಲ್ ಗಾಂಧಿ ಅವರು ಸಿಖ್ಖರ ಪೇಟಾದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಸಿಖ್ಖರನ್ನು ಅತ್ಯಂತ ಗೌರವದಿಂದ ಕಾಣುತ್ತಿದೆ. ವಿದೇಶದಲ್ಲಿ ಹೋಗಿ ಈ ರೀತಿ ಮಾತನಾಡೋದು ಸರಿಯಲ್ಲ. ಚುನಾವಣೆ ಬಗ್ಗೆಯೂ ರಾಹುಲ್ ಮಾತನಾಡಿದ್ದಾರೆ. ಕರ್ನಾಟಕ ಸೇರಿ ವಿರುದ್ಧ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಾಗ ಚುನಾವಣಾ ಆಯೋಗದ ಬಗ್ಗೆ ಏನೂ ಅನಿಸಲೇ ಇಲ್ಲ. ಇಷ್ಟು ಪಾರದರ್ಶಕವಾಗಿ ಎಲ್ಲಿಯೂ ಚುನಾವಣೆ ನಡೆಯಲ್ಲ. ರಾಜಕೀಯ ಟೀಕೆ ಮಾಡುವ ಭರದಲ್ಲಿ ಈ ರೀತಿಯ ಮಾತು ಸರಿಯಲ್ಲ ಎಂದು ಹೇಳಿದರು.
ವಿದೇಶದಲ್ಲಿ ಇಡೀ ದೇಶವನ್ನು ಅಪಮಾನ ಮಾಡ್ತಿದ್ದಾರೆ. ದೇಶದ ಪ್ರತಿಷ್ಠೆಗೆ ಮಸಿ ಬಳಿಯುತ್ತಿದ್ದಾರೆ. ಅವರು ಏನೇ ಹೇಳಲಿ, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಬದ್ಧ.
ರಾಹುಲ್ ಗಾಂಧಿ ಅಪ್ರಬುದ್ಧ ಹೇಳಿಕೆಯನ್ನು ಖಂಡಿಸುತ್ತೇನೆ. ಕಾಂಗ್ರೆಸ್ ಎಂದೆಂದಿಗೂ ಮೀಸಲಾತಿ, ಸಾಮಾಜಿಕ ನ್ಯಾಯದ ವಿರೋಧಿ. ನೆಹರೂ, ಇಂದಿರಾ, ರಾಜೀವ್ ಗಾಂಧಿ ಹೇಳಿಕೆ ಗಮನಿಸಿದರೆ ಇದು ಗೊತ್ತಾಗುತ್ತದೆ. ಕಾಂಗ್ರೆಸ್ನವರು ಅಂಬೇಡ್ಕರ್ ಅವರಿಗೆ ಘೋರ ಅಪಮಾನ ಮಾಡಿದವರು, ಜಗಜೀವನ ರಾಮ್ ಅವರಿಗೆ ಅನ್ಯಾಯ ಮಾಡಿದರು. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ದೂರಿದ್ದಾರೆ.