ಧಾರವಾಡ: "ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರ ಬಡಿದಾಟ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ" ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿಎಂ ಸೇರಿ ಹಲವರು ನಮ್ಮ ಪಕ್ಷದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಅವರು ಮಾತನಾಡಿದ್ದಕ್ಕಾಗಿಯೇ ನಾವೂ ಕೂಡ ಅವರ ಪಕ್ಷದ ಬಗ್ಗೆ ಮಾತನಾಡಬೇಕಾಗಿದೆ" ಎಂದರು.
"ನಿನ್ನೆ ಸಚಿವ ಸಂತೋಷ ಲಾಡ್ ಅವರು ಸ್ವಾಮಿತ್ವದ ಬಗ್ಗೆ ಮಾತನಾಡಿದ್ದಾರೆ. ಈ ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಸ್ವಾಮಿತ್ವ ಎಂಬುದು ಭಾರತ ಸರ್ಕಾರದ ಯೋಜನೆ. ಇದನ್ನು ಆರಂಭ ಮಾಡಿದ್ದೇ ನಾವು. ಮೋದಿ ಅವರು ಬರುವ ಮೊದಲು ಹಳ್ಳಿಯಲ್ಲಿ ವಾಸ ಮಾಡುವ ಜನರ ಮನೆ ಹಾಗೂ ಸುತ್ತಮುತ್ತಲ ವಾತಾವರಣದ ಬಗ್ಗೆ ಇವರಿಗೆ ಲಕ್ಷ್ಯವೇ ಇರಲಿಲ್ಲ" ಎಂದು ಟೀಕಿಸಿದರು.
"60 ವರ್ಷ ಈ ದೇಶದಲ್ಲಿ ಕಾಂಗ್ರೆಸ್‌ನವರು ಆಡಳಿತ ನಡೆಸಿದರು, ರಸ್ತೆ ಬದಿ ವ್ಯಾಪಾರ ಮಾಡುವವರ, ಹಳ್ಳಿಯಲ್ಲಿ ರೈತರ ಜಾಗ ಬಿಟ್ಟು ಉಳಿದ ಜಾಗಕ್ಕೆ ಗುರುತು ಕೊಡುವುದು ಸ್ವಾಮಿತ್ವ ಯೋಜನೆಯ ಉದ್ದೇಶ. ಇದಾಗಿದ್ದೇ ನರೇಂದ್ರ ಮೋದಿ ಅವರ ಕಾಲದಲ್ಲಿ. ಆದರೆ, ಕಾರ್ಯಕ್ರಮದಲ್ಲಿ ಮೋದಿ ಭಾವಚಿತ್ರವನ್ನೇ ಹಾಕುವುದಿಲ್ಲ. ಇದರಿಂದ ಅಧಿಕಾರಿಗಳ ವರ್ತನೆ ಸಹ ಹೇಗಿದೆ ಎಂಬುದು ಗೊತ್ತಾಗುತ್ತದೆ" ಎಂದರು.
ನಕಲಿ ಕಾಂಗ್ರೆಸ್ಸಿನ ನಕಲಿ ಗಾಂಧಿಗಳ ಸಮಾವೇಶ:ಬೆಳಗಾವಿಯಲ್ಲಿ ಕಾಂಗ್ರೆಸ್ನ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಕುರಿತು ಮಾತನಾಡಿ, "ಮಹಾತ್ಮ ಗಾಂಧಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಹೇಳಿದ್ದರು. ಅವರು ಹೇಳಿದಂತಹ ಪಕ್ಷ ಈಗ ಅಸ್ತಿತ್ವದಲ್ಲಿ ಇಲ್ಲ. ಈಗಿನ ಕಾಂಗ್ರೆಸ್ ಪಕ್ಷದ್ದು ಎ ದಿಂದ ಝಡ್‌ವರೆಗೆ ಎಲ್ಲವೂ ಮುಗಿದು ಹೋಗಿದೆ. ಇದು ಒರಿಜಿನಲ್ ಕಾಂಗ್ರೆಸ್ ಅಲ್ಲ. ಇದು ಡುಪ್ಲಿಕೇಟ್. ಇದು ನಕಲಿ ಕಾಂಗ್ರೆಸ್ಸಿನ ನಕಲಿ ಗಾಂಧಿಗಳ ಸಮಾವೇಶ. ಇದಕ್ಕೆ ಸರ್ಕಾರದ ದುಡ್ಡು ಪೋಲು ಮಾಡುತ್ತಿದ್ದಾರೆ. ಸರ್ಕಾರದ ದುಡ್ಡಲ್ಲಿ ಜಾತ್ರೆ ಮಾಡಲು ಹೊರಟಿದ್ದಾರೆ" ಎಂದು ವಾಗ್ಧಾಳಿ ನಡೆಸಿದರು.