ಬೆಳಗಾವಿ :ದೇಶಾದ್ಯಂತ ಗ್ರೀನ್ ಕಾರಿಡಾರ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ದೇಶದ ಪ್ರಮುಖ ನಗರಗಳ ಮಧ್ಯೆ ಹೆದ್ದಾರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸಿ ಸುಗಮ, ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹೇಳಿದರು.
ಬೆಳಗಾವಿ ಜಿಲ್ಲೆಯ 1622 ಕೋಟಿ ವೆಚ್ಚದ ಹೊನಗಾ-ಝಾಡಶಹಾಪುರ ಚತುಷ್ಪಥ ರಿಂಗ್ ರಸ್ತೆ, 941 ಕೋಟಿ ವೆಚ್ಚದ ಚಿಕ್ಕೋಡಿ ಬೈಪಾಸ್ನಿಂದ-ಗೋಟೂರವರೆಗಿನ ಚತುಷ್ಪಥ ಹಾಗೂ ಶಿರಗುಪ್ಪಿಯಿಂದ ಅಂಕಲವರೆಗಿನ 887 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಸೇರಿದಂತೆ ಒಟ್ಟಾರೆ 13 ಸಾವಿರ ಕೋಟಿ ಮೌಲ್ಯದ 680 ಕಿ.ಮೀ. ಉದ್ದದ 36 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಗುರುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರ ಸಮರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಅನೇಕ ವರ್ಷಗಳಿಂದ ಬೆಳಗಾವಿ ರಿಂಗ್ ರಸ್ತೆ ಸಮಸ್ಯೆ ಚರ್ಚೆಯಾಗಿತ್ತು. ಸುರೇಶ್ ಅಂಗಡಿ ಅವರು ಹಾಗೂ ಎಲ್ಲ ಶಾಸಕರು ಪ್ರಸ್ತಾಪಿಸಿದ್ದರು. ಇದೀಗ ಬೆಳಗಾವಿ ರಿಂಗ್ ರಸ್ತೆಗೆ ಕಾಲ ಕೂಡಿಬಂದಿದೆ. ರಾಜ್ಯದಲ್ಲಿ 8200 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದೆ. ರಾಜ್ಯದಲ್ಲಿ 3 ಲಕ್ಷ ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಕೈಗೊಳ್ಳುವ ಗುರಿ ಇತ್ತು. ಇಂದು ಬಹುತೇಕ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ರಸ್ತೆಗಳು ಅಭಿವೃದ್ಧಿಗೆ ಮಾರ್ಗಗಳಾಗಿವೆ. ಬೆಳಗಾವಿ ಬೈಪಾಸ್ 3400 ಕೋಟಿ ವೆಚ್ಚದ ಈ ಕಾಮಗಾರಿಯಿಂದ ಬೆಳಗಾವಿ-ಗೋವಾ ರಾಜ್ಯದ ನಡುವಿನ ಪ್ರಯಾಣದ ಅವಧಿಯನ್ನು ಕಡಿತಗೊಳಿಸಲಿದೆ ಎಂದರು.
ಪ್ರಯಾಣದ ಅವಧಿ ಮೂರುವರೆ ಗಂಟೆ ಮಾತ್ರ:ಬೆಳಗಾವಿ-ಹುನಗುಂದ-ರಾಯಚೂರು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದ 9000 ಕೋಟಿ ರೂ. ವೆಚ್ಚದ ಕಾಮಗಾರಿಯು ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿಯು ಮೂರುವರೆ ಗಂಟೆಗೆ ಇಳಿಯಲಿದೆ. ಬೆಳಗಾವಿ-ಸಂಕೇಶ್ವರ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಅರಣ್ಯ ಇಲಾಖೆಯ ಅನುಮತಿ ಸಕಾಲದಲ್ಲಿ ದೊರಕದಿರುವುದರಿಂದ ಕಾಮಗಾರಿ ಕುಂಠಿತಗೊಂಡಿದೆ. ಆದ್ದರಿಂದ ರಾಜ್ಯ ಸರ್ಕಾರವು ಅರಣ್ಯ ಇಲಾಖೆಯ ಅನುಮತಿ ದೊರಕಿಸಿಕೊಡುವುದರ ಜತೆಗೆ ಇತರೆ ಅಡ್ಡಿಗಳನ್ನು ನಿವಾರಿಸಿಕೊಟ್ಟರೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುಕೂಲವಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೆದ್ದಾರಿ ಜಾಲವನ್ನು ಜೋಡಿಸುವ ಮೂಲಕ ಒಟ್ಟಾರೆ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದರ ಜತೆಗೆ ಅಭಿವೃದ್ಧಿಗೆ ಪೂರಕವಾದ ವಾತಾವರಣ ಲಭಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಶಯ ವ್ಯಕ್ತಪಡಿಸಿದರು.
ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಗೊಳಿಸಲು 17 ಸಾವಿರ ಕೋಟಿ ವೆಚ್ಚದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಾರಿಗೆ ಸಮಸ್ಯೆ ನಿವಾರಣೆ ಜತೆಗೆ ರಾಜ್ಯದ ಜನರಿಗೆ ಅನುಕೂಲವಾಗಲಿದೆ. ಜನವರಿ 2025 ರ ವೇಳೆಗೆ ಆರು ಪ್ಯಾಕೇಜ್ಗಳ ರಿಂಗ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಬೆಳಗಾವಿಯಲ್ಲಿ ಕಬ್ಬು ಬೆಳೆ ಜಾಸ್ತಿಯಾಗಿದೆ. ಎಥೆನಾಲ್ ಆರ್ಥಿಕತೆ ತೀವ್ರ ಬೆಳವಣಿಗೆ ಕಂಡಿದೆ. ಪೆಟ್ರೋಲ್ ಬದಲಾಗಿದೆ. ಎಥೆನಾಲ್ ಬಳಕೆಗೆ ಪ್ರೋತ್ಸಾಹ ನೀಡಲು ಎಥೆನಾಲ್ ಪಂಪ್ ಸ್ಥಾಪನೆಗೆ ಅನುಮತಿ ನೀಡಲಾಗುತ್ತಿದೆ. ಬೆಳಗಾವಿಯಲ್ಲಿ ಎಥೆನಾಲ್ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಅವಕಾಶಗಳಿವೆ. ರೈತರ ಅಭಿವೃದ್ಧಿ ಮತ್ತು ಪರಿಸರ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯಾದ್ಯಂತ ಎಥೆನಾಲ್ ಬಳಕೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದರು.