ಬೆಂಗಳೂರು :ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾಗಿರುವ ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಕುರಿತಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿಯವರು, ನನಗೆ ಏಕೆ ಈ ಪ್ರಶ್ನೆ ಕೇಳ್ತೀರಾ?. ಏಕೆ ನೀವು ನನಗೆ ಬೆದರಿಕೆ ಹಾಕುತ್ತಿದ್ದೀರಿ? ಎಂದಿದ್ದಾರೆ.
ಇಂದು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಈ ರೀತಿಯ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಕಾನೂನು ಅದರ ಕ್ರಮ ತೆಗೆದುಕೊಳ್ಳುತ್ತೆ ಎಂದು ಹೇಳಿದ್ದಾರೆ. ಸೂರಜ್ರನ್ನ ಪಕ್ಷದಿಂದ ಉಚ್ಚಾಟನೆ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ, ಯಾರನ್ನ? ನನಗೇನು ಸಂಬಂಧ? ಅದೆಲ್ಲ ಆಮೇಲೆ ಮಾತಾಡೋಣ ಎಂದು ತಿಳಿಸಿದರು.
ನೀಟ್ ಪರೀಕ್ಷೆಯ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ನಿನ್ನೆಯೇ ಇಸ್ರೋ ಮಾಜಿ ಮುಖ್ಯಸ್ಥರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ. ಸಾಕಷ್ಟು ವಿಚಾರಗಳು ಇವೆ. ಪರೀಕ್ಷಾ ಅಕ್ರಮದ ಕುರಿತ ತಪ್ಪಿತಸ್ಥರ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಚನ್ನಪಟ್ಟಣಕ್ಕೆ ಭೇಟಿ ಹಾಗೂ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಯಾವ ಅಭ್ಯರ್ಥಿ ಅಂತ ಚರ್ಚೆ ಮಾಡೊಲ್ಲ. ನಿಧಾನವಾಗಿ ಆಯ್ಕೆ ಮಾಡೋಣ. ನನಗೇನು ಆತುರ ಇಲ್ಲ, ನಿಧಾನವಾಗಿ ಮಾಡೋಣ. ಹಿಡಿದುಕೊಂಡಿರುವವರು ಯಾರು? ಹೋದರೆ ತಪ್ಪೇನಿದೆ?. ಅವರೊಬ್ಬ ಮಂತ್ರಿ ಆಗಿದ್ದಾರೆ, ಉಪಮುಖ್ಯಮಂತ್ರಿಗಳು ಬೇರೆ. ಡಿಫ್ಯಾಕ್ಟರ್ ಚೀಫ್ ಮಿನಿಸ್ಟರ್ ಬೇರೆ. ಅವರನ್ನ ಹೋಗಬೇಡಿ ಅಂತ ಹೇಳೋಕೆ ಆಗುತ್ತಾ?. ಚನ್ನಪಟ್ಟಣಕ್ಕೆ ಈಗಲಾದ್ರೂ ಗಮನಹರಿಸಿದ್ದಕ್ಕೆ ಅವರಿಗೆ ಅಭಿನಂದಿಸೋಣ ಎಂದು ಕ್ಷೇತ್ರದ ಮಾಜಿ ಶಾಸಕ ಹೆಚ್ಡಿಕೆ ಹೇಳಿದರು.
ನರೇಂದ್ರ ಮೋದಿ, ನಾನೂ ಕಾರಣವಲ್ಲ :ಹೆಚ್ಎಂಟಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ವಿಚಾರವಾಗಿ ಮಾತನಾಡಿ, ಸಾವಿರಾರು ಜನ ಉದ್ಯೋಗ ಮಾಡಿಕೊಳ್ಳುವ ಮುಖಾಂತರ ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿದ್ದ ಒಂದು ಉದ್ಯಮವನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದ್ದಾರೆ. ನಿನ್ನೆ ನಿರಂತರವಾಗಿ 3 ಗಂಟೆಗಳ ಕಾಲ ಸಭೆ ಮಾಡಿದ್ದೇನೆ. ಹೆಚ್ಎಂಟಿಯ ಹಲವಾರು ಸಮಸ್ಯೆಗಳ ಬಗ್ಗೆ ಹರಿಯಾಣ, ಹೈದರಾಬಾದ್, ಬೆಂಗಳೂರಿನಿಂದ ವಿವರಣೆ ಪಡೆದಿದ್ದೇನೆ. ಕೆಲವು ಕಡೆ ಸಂಬಳ ಕೊಡೋಕು ಪರಿಸ್ಥಿತಿ ಸರಿಯಿಲ್ಲ. ಇದಕ್ಕೆ ನರೇಂದ್ರ ಮೋದಿ, ನಾನೂ ಕಾರಣವಲ್ಲ. ಈ ಸಂಸ್ಥೆಯನ್ನ ಹಲವಾರು ವರ್ಷಗಳಿಂದಲೇ ಹಾಳು ಮಾಡಿ ಬಿಟ್ಟಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಐಟಿಐ, ಹೆಚ್ಎಎಲ್, ಎನ್ಜಿಎಫ್, ಹೆಚ್ಎಂಟಿ ಉದ್ಯಮಗಳಿಗೆ ಪ್ರತಿನಿತ್ಯ ನೂರಾರು ಬಸ್ ಮುಖಾಂತರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇವತ್ತು ಅಂತಹ ಪರಿಸ್ಥಿತಿ ಇಲ್ಲ, ಸಂಪೂರ್ಣ ನಾಶವಾಗಿದೆ. ನಿನ್ನೆಯ ದಿನ ಸಂಪೂರ್ಣವಾಗಿ ಮಾಹಿತಿ ಪಡೆಯಲಿಕ್ಕೆ ಅಲ್ಲಿಯ ಪ್ರಮುಖರ ಜೊತೆ ಸಭೆ ಮಾಡಿದ್ದೇನೆ. ಮಾಹಿತಿಗಳನ್ನ ಕೊಟ್ಟಿದ್ದಾರೆ. ಇವತ್ತೂ ಸಹ ದೊಡ್ಡ ಮಟ್ಟದಲ್ಲಿ ನಷ್ಟದಲ್ಲಿದೆ. ನಮಗೆ ಇಲ್ಲಿ ರಾಜ್ಯದಲ್ಲಿ ಈ ಸರ್ಕಾರದಿಂದ ನಾವು ಸಹಕಾರ ಪಡೆಯೋಕೆ ಸಾಧ್ಯವಿಲ್ಲ. ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದ್ರೆ ಈ ಸರ್ಕಾರಕ್ಕೆ ಜನತೆಯ ಸಮಸ್ಯೆ ಪರಿಹಾರ ಮಾಡೋಕೆ ಆಗಿಲ್ಲ.