ಕರ್ನಾಟಕ

karnataka

ETV Bharat / state

ಮೈಕ್ರೋ ಫೈನಾನ್ಸ್​ ಹಾವಳಿ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಹಲವೆಡೆ ಹೆಚ್ಚಾಗಿದೆ: ಹೆಚ್​ ಡಿ ಕುಮಾರಸ್ವಾಮಿ - MICROFINANCE TORTURE

ಕೇಂದ್ರ ಸಚಿವ ಹೆಚ್​. ಡಿ ಕುಮಾರಸ್ವಾಮಿ ಅವರು ಮೈಕ್ರೋ ಫೈನಾನ್ಸ್​ ಹಾವಳಿ ಕುರಿತು ಮಾತನಾಡಿದ್ದಾರೆ.

union-minister-h-d-kumaraswamy
ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Jan 24, 2025, 11:01 PM IST

ರಾಮನಗರ :ಕೇವಲ ರಾಮನಗರ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಹಲವೆಡೆ ಮೈಕ್ರೋ ಫೈನಾನ್ಸ್​ ಹಾವಳಿ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಹೆಚ್.​ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರದ ದಾಸೇಗೌಡನದೊಡ್ಡಿ ಗ್ರಾಮದ ಆಂಜನೇಯ ಸ್ವಾಮಿ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೈಕ್ರೋ ಫೈನಾನ್ಸ್ ಹಾವಳಿಯನ್ನ ಸರ್ಕಾರ ನೋಡಬೇಕಲ್ವಾ?. ಜಿಲ್ಲಾ ಉಸ್ತುವಾರಿ ಸಚಿವರು ನೋಡಬೇಕಲ್ವಾ? ಎಂದ ಅವರು, ಇವತ್ತು ರಾಜ್ಯ ಸರ್ಕಾರದಿಂದ 2000 ರೂ ನೀಡುತ್ತಿದ್ದರೂ ಮೈಕ್ರೋ ಫೈನಾನ್ಸ್​ನಿಂದ ಜನರೇಕೆ ಸಾಲ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಆಂಜನೇಯ ಸ್ವಾಮಿ ಮಹಾದ್ವಾರ ಉದ್ಘಾಟನೆ ನಡೆಸಿದ ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ (ETV Bharat)

ನಾನು ಸಿಎಂ ಆಗಿದ್ದಾಗ ಖಾಸಗಿಯವರಿಂದ ಬಡವರು ಸಾಲ ಪಡೆದಿರುವುದಕ್ಕೆ, ಒಂದು ಬಾರಿ ಅವರನ್ನ ಋಣಮುಕ್ತರನ್ನಾಗಿಸಲು ಒಂದು ಕಾನೂನು ತಂದೆ, ಬಿಲ್ ಪಾಸ್​ ಮಾಡಿದ್ದರು. ಏನಾಯ್ತು ಆ ಬಿಲ್​​? ಎಂದು ಪ್ರಶ್ನಿಸಿದರು. ನಂತರ ಅಂದಿನ ಸಹಕಾರ ಸಚಿವರನ್ನ ಕೇರಳಕ್ಕೆ ಕಳುಹಿಸಿ ಅಧ್ಯಯನ ಮಾಡಿಸಿದ್ದೆ. ಕೇರಳದಲ್ಲೂ ಈ ವಿಚಾರಕ್ಕೆ ಕಮಿಷನ್​ ಇದೆ. ಆ ರೀತಿ ಒಂದು ಕಮಿಷನ್​ ರಾಜ್ಯದಲ್ಲಿಯೂ ತಂದು ಸಾಲ ತೀರಿಸಲಾಗದವರಿಗೆ ಯಾವ ರೀತಿ ನೆರವು ತರಬೇಕು ಎಂಬುದರ ಬಗ್ಗೆ ಯೋಜನೆ ತರಲು ಹೊರಟೆ. ಸರ್ಕಾರ ತೆಗೆದರು, ಇವತ್ತು ಸರ್ಕಾರ ನಡೆಯುತ್ತಿದೆಯಲ್ಲ?. ರಾಮನಗರದಲ್ಲಿ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾರಾದರೂ ಮಂತ್ರಿಗಳು ಬಂದಿದ್ದಾರಾ?. ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಮೇಲು ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮಂಜೂರಾತಿ: ಚನ್ನಪಟ್ಟಣ - ರಾಮನಗರ ನಡುವಿನ ವಂದರಗುಪ್ಪೆ ಗ್ರಾಮದ ಸಮೀಪದ ಕಿ. ಮೀ. 52/100/200 ಕಿ. ಮೀ ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್​ಸಿ 44) ನಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮಂಜೂರಾತಿ ನೀಡಿದೆ.

ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್. ಡಿ ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು, ಮೇಲು ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ. ಮೇಲು ಸೇತುವೆ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ರೈಲ್ವೆ ಇಲಾಖೆ ತಯಾರು ಮಾಡುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭ ಮಾಡಲಾಗುವುದು ಎಂದು ರೈಲ್ವೆ ಸಚಿವರು ಕುಮಾರಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ ಮಾತನಾಡಿದರು (ETV Bharat)

ಲೆವೆಲ್ ಕ್ರಾಸಿಂಗ್ 44ರಲ್ಲಿ ವಂದರಗುಪ್ಪೆ ಗ್ರಾಮವಿದ್ದು, ಪದೇ ಪದೆ ರೈಲ್ವೆ ಗೇಟ್ ಹಾಕುವುದರಿಂದ ಬಹಳ ಸಮಸ್ಯೆ ಆಗುತ್ತಿದೆ. ನಿತ್ಯವೂ ಸಾವಿರಾರು ವಾಹನಗಳು ಈ ಕ್ರಾಸಿಂಗ್ ಮೂಲಕ ಸಂಚರಿಸುತ್ತವೆ. ಹತ್ತಾರು ಗ್ರಾಮಗಳ ಜನರಿಗೆ, ಅದರಲ್ಲಿಯೂ ವಿದ್ಯಾರ್ಥಿಗಳಿಗೆ ರೈಲ್ವೆ ಗೇಟು ಬೀಳುವುದರಿಂದ ಬಹಳಷ್ಟು ಅನಾನುಕೂಲ ಆಗುತ್ತಿದೆ. ಮುಖ್ಯವಾಗಿ ಈ ರಸ್ತೆ ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಮನವಿ ಪತ್ರದಲ್ಲಿ ಕೇಂದ್ರ ಸಚಿವರು ಉಲ್ಲೇಖ ಮಾಡಿದ್ದರು.

ಒಮ್ಮೆ ರೈಲ್ವೆ ಗೇಟ್ ಹಾಕಿದರೆ ಆಂಬ್ಯುಲೆನ್ಸ್​ ಗಳು ಕೂಡ ಮಾರ್ಗ ನಡುವೆಯೇ ನಿಲ್ಲುವುದು ಸಾಮಾನ್ಯವಾಗಿದೆ. ದಿನನಿತ್ಯವೂ ಬೆಂಗಳೂರು - ಮೈಸೂರು ಮಾರ್ಗದಲ್ಲಿ ಸುಮಾರು 75ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದು, ಪದೇ ಪದೆ ಗೇಟ್ ಹಾಕಬೇಕಾದ ಪರಿಸ್ಥಿತಿ ಇದೆ ಎಂದು ಕುಮಾರಸ್ವಾಮಿ ಅವರು ಮನವರಿಕೆ ಮಾಡಿಕೊಟ್ಟಿದ್ದರು.

ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು ?: ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಮೈಕ್ರೋ ಫೈನಾನ್ಸ್ ಹಾವಳಿ ಎಂಬುದು ಜಿಲ್ಲೆ ಮಾತ್ರವಲ್ಲದೇ, ರಾಜ್ಯದಲ್ಲಿಯೂ ಇದೆ. ಇವತ್ತು ಬಿಪಿಎಲ್ ಕಾರ್ಡ್​ದಾರರ ಸಮಸ್ಯೆ, ಆರೋಗ್ಯ, ಆರ್ಥಿಕ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ರಾಮನಗರ ಶಾಸಕರ ವಿರುದ್ಧ ಭೂಕಬಳಿಕೆ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಅನ್ನೋ ಕಾನೂನು ಉಲ್ಲಂಘನೆ ಆಗಿದೆ. ರಾಮನಗರ ಶಾಸಕರು 67 ಎಕರೆ ಜಮೀನು ಲಪಟಾಯಿಸಿದ್ದಾರೆ ಅನ್ನೋದು ಬೆಳಕಿಗೆ ಬಂದಿದೆ. ಅಲ್ಲಿನ ರೈತರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ರೈತರಿಗೆ ದ್ರೋಹ ಮಾಡ್ತಿದ್ದಾರೆ. ಇದಕ್ಕೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ :ಮೈಕ್ರೋ ಫೈನಾನ್ಸ್​ನಿಂದ ಮನೆಗೆ ಬೀಗ: ಬಾಣಂತಿ ಮನೆಗೆ ವಾಪಸ್​ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಾಯಕ್ಕೆ ಕುಟುಂಬದಿಂದ ಧನ್ಯವಾದ - MICROFINANCE STAFF TORTURE

ABOUT THE AUTHOR

...view details