ಬೆಂಗಳೂರು:ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ಮಾದರಿಯಲ್ಲಿ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಶುಕ್ರವಾರ ಮುಂದಿಟ್ಟಿತು. ಇದರೊಟ್ಟಿಗೆ ಐಟಿ - ಬಿಟಿ ವಿಭಾಗದ ಅನೇಕ ಯೋಜನೆಗಳಿಗೆ ತ್ವರಿತ ಅನುಮತಿ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.
ನೂತನವಾಗಿ ರಚನೆಗೊಂಡ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಕರ್ನಾಟಕದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಐ&ಬಿ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಇಲಾಖೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಮುಂದಿಟ್ಟರು. ಕರ್ನಾಟಕ ರಾಜ್ಯ ಐಟಿ, ಬಿಟಿ, ಏರೋಸ್ಪೇಸ್, ಆಟೋಮೋಟಿವ್, ಜವಳಿ ಮತ್ತು ಭಾರಿ ಕೈಗಾರಿಕಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. ಕರ್ನಾಟಕವು ಈ ಕ್ಷೇತ್ರಗಳ ಅಭಿವೃದ್ಧಿಗೆ ಸೂಕ್ತ ಸ್ಥಳವಾಗಿದ್ದು, ಹೂಡಿಕೆಗೆ ಅಗಾಧ ಅವಕಾಶವಿರುವ ಬಗ್ಗೆ ಉಲ್ಲೇಖಿಸಿದರು.
ಟೆಕ್ ಹಬ್ ಮತ್ತು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಬೆಂಗಳೂರು ಗುರುತಿಸಿಕೊಂಡಿದೆ. ಬೆಂಗಳೂರು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಡೊಮೇನ್, ಫಿನ್ಟೆಕ್ ಸ್ಪೇಸ್, ಎಂಟರ್ಪ್ರೈಸ್ ಟೆಕ್, ಇ-ಕಾಮರ್ಸ್ ಮತ್ತು ಎಡ್-ಟೆಕ್ ಕ್ಷೇತ್ರಗಳಲ್ಲಿ ತೆರೆದ ವೇದಿಕೆಯಾಗಿದೆ. ಕರ್ನಾಟಕದಲ್ಲಿ ಗಿಫ್ಟ್ ಸಿಟಿ ಮಾದರಿಯಲ್ಲಿ ಅವಕಾಶ ತೆರೆದಿಡುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ, ಹಲವಾರು ಉದ್ಯೋಗಾವಕಾಶಗಳ ಸೃಷ್ಟಿಗೆ ಅವಕಾಶ ಲಭ್ಯವಾಗಲಿದೆ. ಜೊತೆಗೆ ಯತೇಚ್ಚವಾಗಿ ವಿದೇಶಿ ಹೂಡಿಕೆಗಳನ್ನೂ ಆಕರ್ಷಿಸಬಹುದು ಎಂದು ವಿವರಿಸಿದರು.
4.5 ಶತಕೋಟಿ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ ರಫ್ತುಗಳೊಂದಿಗೆ ರಾಜ್ಯವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಶೇ.46ರಷ್ಟು ರಾಷ್ಟ್ರೀಯ ಪಾಲನ್ನು ಹೊಂದಿದ್ದು, ಭಾರತದ ಕೈಗಾರಿಕಾ ಉತ್ಪಾದನೆಗೆ ಶೇ.10ರಷ್ಟು ಕೊಡುಗೆ ನೀಡುತ್ತಿದೆ ಎಂದು ಸಚಿವರು ಹೇಳಿದರು. ರಾಜ್ಯವು 300ಕ್ಕೂ ಹೆಚ್ಚು ರಫ್ತು-ಆಧಾರಿತ ಉತ್ಪಾದನಾ ಘಟಕಗಳಿಗೆ ನೆಲೆಯಾಗಿದೆ. ಭಾರತದಲ್ಲಿ ಕರ್ನಾಟಕವು ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರವನ್ನು ಹೊಂದಿದೆ. 100ಕ್ಕೂ ಹೆಚ್ಚು ಫ್ಯಾಬುಲೆಸ್ ಚಿಪ್ ವಿನ್ಯಾಸ ಕೇಂದ್ರಗಳನ್ನು ಹೊಂದಿದ್ದು, ಭಾರತದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಸಾಧನಗಳ ಪ್ರಮುಖ ತಯಾರಕ ಸ್ಥಾನವಾಗಿದೆ. ಇದು ಅನೇಕ ಆಟೋಮೊಬೈಲ್ ತಯಾರಿಕೆ, ಆರ್ನೆಡಿಕಲ್ ಸಾಧನಗಳ ತಯಾರಿಕೆ, ಭಾರಿ ವಿದ್ಯುತ್ ಯಂತ್ರೋಪಕರಣಗಳ ಕಂಪನಿಗಳನ್ನೂ ಹೊಂದಿದೆ ಎಂದು ವಿವರಿಸಿದರು.