ರಾಮನಗರ: ನಿಖಿಲ್ ನನ್ನ ಮಗನಾಗಿರುವುದರಿಂದ ನಾನು ಮಾತನಾಡುತ್ತಿಲ್ಲ. ಅವರಿಗಿರುವ ಗುಣದ ಬಗ್ಗೆ ಮಾತಾಡುತ್ತೇನೆ. ಇಂದು ನಾನು ಅವರನ್ನು ಪಕ್ಷಕ್ಕೆ ಒಪ್ಪಿಸುತ್ತಿದ್ದು, ಮಾರ್ಗದರ್ಶನ ನೀಡುವ ಜವಾಬ್ದಾರಿ ನಿಮಗಿದೆ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಡದಿಯ ತಮ್ಮ ನಿವಾಸದಲ್ಲಿಂದು ಅವರು ಜೆಡಿಎಸ್ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat) ಈ ವೇಳೆ ಮಾತನಾಡಿದ ಹೆಚ್‌ಡಿಕೆ, "ಪಕ್ಷದಲ್ಲಿ ಅಸಮಾಧಾನಗಳಿದ್ದರೆ, ಅವುಗಳನ್ನು ಬಗೆಹರಿಸಿಕೊಳ್ಳಿ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲ್ಲುವುದು ಮುಖ್ಯ" ಎಂದರು.
"ನಮ್ಮದು ಕಾರ್ಯಕರ್ತರಿಗೋಸ್ಕರ ಇರುವ ಪಕ್ಷ. ಜಾತಿ ರಾಜಕಾರಣದಲ್ಲಿ ನಮಗೆ ನಂಬಿಕೆ ಇಲ್ಲ. ಎಲ್ಲ ಸಮುದಾಯಗಳನ್ನು ನಮ್ಮೊಂದಿಗೆ ಕೊಂಡೊಯ್ಯಲು ಬದ್ಧರಾಗಿದ್ದೇವೆ. ನಾವು ಒಗ್ಗಟ್ಟಿನಿಂದ ಇದ್ದರೆ, ನಮ್ಮ ಪಕ್ಷವನ್ನು ಯಾವುದೇ ಶಕ್ತಿಗಳು ಅಂತ್ಯಗೊಳಿಸಲಾರವು" ಎಂದು ತಿಳಿಸಿದರು.
ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ: ಪಕ್ಷ ಬಲವರ್ಧನೆ ಮತ್ತು ಸಂಘಟನೆಯ ದೃಷ್ಟಿಯಿಂದ ರಾಜ್ಯಾದ್ಯಂತ ಮತ್ತೆ ಸದಸ್ಯತ್ವ ನೊಂದಣಿ ಪುನಾರಂಭವಾಗಬೇಕು ಎಂದು ಪಕ್ಷದ ಮುಖಂಡರಿಗೆ ಹೆಚ್‌ಡಿಕೆ ಸೂಚನೆ ನೀಡಿದರು. ಇದೇ ವೇಳೆ, ಉಪಚುನಾವಣೆಯಲ್ಲಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರನ್ನೂ ಶ್ಲಾಘಿಸಿದರು. ನೀವು ಪಟ್ಟ ಶ್ರಮದಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಇದು ಮುಂದಿನ ಸವಾಲುಗಳಿಗೆ ತಯಾರಾಗಲು ಸೂಚನೆ ಎಂದು ಹೇಳಿದರು.
ಸದಸ್ಯತ್ವ ಚಾಲನೆ ಪುನಾರಂಭ:ಪ್ರತೀ ಬೂತ್‌ಗಳಲ್ಲಿ ಸದಸ್ಯತ್ವ ನೋಂದಣಿಗೆ ಚಾಲನೆ ಸಿಗಬೇಕು. ಕೆಲವು ಜಿಲ್ಲೆಗಳಲ್ಲಿ ಸದಸ್ಯತ್ವ ಚಾಲನೆ ನಿಂತಿದೆ, ಅದನ್ನು ಮತ್ತೆ ಆರಂಭಿಸಬೇಕು. ಉಪಚುನಾವಣೆ ಫಲಿತಾಂಶಗಳು ಪಕ್ಷದ ಭವಿಷ್ಯವನ್ನು ತೀರ್ಮಾನಿಸುವುದಿಲ್ಲ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರು (ETV Bharat) 2018ರಲ್ಲಿ 2013ರಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ 75 ಸ್ಥಾನಗಳಿಗೆ ಕುಸಿಯಿತು. ಸಾಮಾನ್ಯ ಚುನಾವಣೆಯ ಚಿತ್ರವೇ ಬೇರೆ. ಸ್ವತಃ ಅವರ ಪಕ್ಷದ ಶಾಸಕರೇ ಅಭಿವೃದ್ಧಿಗೆ ಹಣವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಸರ್ಕಾರವನ್ನು ಕೆಡವಲು ನಾವು ಬಿಜೆಪಿಯೊಂದಿಗೆ ಸಹಕಾರ ನೀಡಬೇಕಿದೆ ಎಂದು ಹೇಳಿದರು.
ಬಂಡೆಪ್ಪ ಖಾಶೆಂಪುರ್, ಹೆಚ್.ಕೆ.ಕುಮಾರಸ್ವಾಮಿ, ಸಾ.ರಾ.ಮಹೇಶ್, ಸುರೇಶ್ ಬಾಬು, ಸಿ.ಎಸ್.ಪುಟ್ಟರಾಜು, ಸಮೃದ್ಧಿ ಮಂಜುನಾಥ, ನಿಖಿಲ್ ಕುಮಾರಸ್ವಾಮಿ, ಬಾಲಕೃಷ್ಣ, ಶಾರದಾ ಪೂರ್ಯ ನಾಯಕ್, ಲೀಲಾದೇವಿ ಪ್ರಸಾದ್, ಎಂ.ಟಿ.ಕೃಷ್ಣಪ್ಪ, ಜಿ.ಟಿ.ಹರೀಶ್ ಗೌಡ, ಮಂಜೇಗೌಡ, ರಮೇಶ್ ಗೌಡ, ತಿಪ್ಪೇಸ್ವಾಮಿ ಮತ್ತು ನಾಗರಾಜಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಚಂದ್ರಶೇಖರನಾಥ ಸ್ವಾಮೀಜಿಗೆ ನೋಟಿಸ್; ನನ್ನ ಬಗ್ಗೆ ಜನಾಂಗೀಯ ಭಾಷೆ ಬಳಕೆ ವಿರುದ್ಧ ನೋಟಿಸ್ ಏಕೆ ಕೊಟ್ಟಿಲ್ಲ: ಹೆಚ್‌ಡಿಕೆ