ಬೆಂಗಳೂರು:ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಮಾರ್ಚ್ 4 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ 42 ಎಂಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ಬೆಂಗಳೂರಿನ ಪರಮೇಶ್ ಎಂಬುವರು ಉದಯನಿಧಿ ಸ್ಟಾಲಿನ್ ಹೇಳಿಕೆಯ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ 42 ಎಂಸಿಎಂಎಂ ನ್ಯಾಯಾಲಯ ಖುದ್ದು ಹಾಜರಿಗೆ ಸಮನ್ಸ್ ಜಾರಿಗೊಳಿಸಿದೆ. ಜೊತೆಗೆ, ಕಾರ್ಯಕ್ರಮ ಸಂಘಟಿಸಿದ್ದ ಎಸ್. ವೆಂಕಟೇಶ್, ಮದುಕರ್ ರಾಮಲಿಂಗಂ ಹಾಗೂ ಅದವನ್ ಡಿಚನ್ಯ ಅವರಿಗೂ ನ್ಯಾಯಾಲಯ ಸಮನ್ಸ್ ನೀಡಿದೆ.
ಪರಮೇಶ್ ತಮ್ಮ ದೂರಿನಲ್ಲಿ, 2023ರ ಸೆಪ್ಟೆಂಬರ್ 3ರಂದು ಚೆನ್ನೈನ ತೆನಂಪೇಟೆಯಲ್ಲಿ ನಡೆದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ಎಂದು ಉದಯನಿಧಿ ಸ್ಟಾಲಿನ್ ಭಾಷಣ ಮಾಡಿರುವುದನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದೇನೆ. ಈ ಹೇಳಿಕೆಯು ಸಮಾಜದಲ್ಲಿ ಅಶಾಂತಿ, ದಂಗೆ ಎಬ್ಬಿಸಲು ಪ್ರಚೋದನೆ ನೀಡುವಂತಿದೆ. ಈ ಹೇಳಿಕೆಯನ್ನು ಓದಿದ ಅನ್ಯ ಧರ್ಮಿಯರು ನನ್ನ ಧರ್ಮದ ಬಗ್ಗೆ ಕ್ಲುಲ್ಲಕವಾಗಿ ಮಾತನಾಡಿದ್ದಾರೆ. ಇದರಿಂದ ನನ್ನ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗಿದೆ ಎಂದು ಹೇಳಿದ್ದಾರೆ. ಆದ ಕಾರಣ ಉದಯನಿಧಿ ಸ್ಟಾಲಿನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದರು.
ಇದನ್ನೂ ಓದಿ:'ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ವರ್ಗಾವಣೆಯಾದಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಕಾರಣ ನೀಡುವ ಅಗತ್ಯವಿಲ್ಲ'