ಕರ್ನಾಟಕ

karnataka

ETV Bharat / state

ಕರಾವಳಿಯಲ್ಲಿ ಮತ್ತೆ ಭೂಗತ ಲೋಕದ ಸದ್ದು! ಹಫ್ತಾ ವಸೂಲಿಗೆ ಯತ್ನ, ಕಲಿ ಯೋಗೀಶನ ಸಹಚರರ ಸೆರೆ - Extortion Case

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಇಬ್ಬರು ಸಹಚರರನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

MANGALURU: TWO ASSOCIATES OF UNDERWORLD GANGSTER KALI YOGISH ARRESTED
ಭೂಗತ ಪಾತಕಿ ಕಲಿ ಯೋಗೀಶನ ಸಹಚರರ ಬಂಧನ (ETV Bharat)

By ETV Bharat Karnataka Team

Published : Jul 31, 2024, 7:20 AM IST

ಮಂಗಳೂರು: ಕಳೆದ ಹಲವು ವರ್ಷಗಳಿಂದ ಮೌನವಾಗಿದ್ದ ಭೂಗತ ಪಾತಕಿಗಳು ಮತ್ತೆ ಮಂಗಳೂರಿನಲ್ಲಿ ಸದ್ದು ಮಾಡುತ್ತಿದ್ದಾರೆ. ಸೌರಾಷ್ಟ್ರ ಸಂಸ್ಥೆಯ ಮಾಲೀಕರಿಗೆ 50 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಭೂಗತ ಪಾತಕಿ ಕಲಿ ಯೋಗೀಶನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮೀಷನರ್ ಅನುಪಮ್‌ ಅಗರ್ವಾಲ್, ಪ್ರಕರಣದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮುಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾ (40), ಬೆಂಗಳೂರಿನ ಹೊಸಕೋಟೆಯಲ್ಲಿ ವಾಸವಿರುವ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮುಹಮ್ಮದ್ ರಫೀಕ್ ಯಾನೆ ಮುಡಿಪು ರಫೀಕ್ ಯಾನೆ ರಫೀಕ್ (36) ಎಂಬಿಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ವಶಪಡಿಸಿಕೊಂಡ ಪಿಸ್ತೂಲ್‌ಗಳು (ETV Bharat)

ಆರೋಪಿಗಳಿಂದ 1 ಪಿಸ್ತೂಲ್, 1 ರಿವಾಲ್ವರ್, 12 ಸಜೀವ ಮದ್ದುಗುಂಡುಗಳು, 42 ಗ್ರಾಂ ಮಾದಕ ವಸ್ತು ಎಂಡಿಎಂಎ, ಇನ್ನೋವಾ ಕಾರು ಹಾಗೂ 3 ಮೊಬೈಲ್ ಫೋನುಗಳು, ಡಿಜಿಟಲ್ ತೂಕ ಮಾಪಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ 10 ಲಕ್ಷ ರೂ ಎಂದರು.

ಇತ್ತೀಚೆಗೆ ಆರೋಪಿಗಳು ಸೌರಾಷ್ಟ್ರ ಸಂಸ್ಥೆಯ ಮಾಲೀಕರನ್ನು ಮಾಲ್​​ವೊಂದರ ಬಳಿ‌ ಭೇಟಿಯಾಗಿ ಫೋನ್ ನೀಡಿ ಮಾತಾಡಲು ಹೇಳಿದ್ದರು. ಕಲಿ ಯೋಗೀಶ್ ಎಂಬಾತ ಮಾತನಾಡಿ, 50 ಲಕ್ಷ ರೂ. ನೀಡುವಂತೆ ಬೆದರಿಕೆಯೊಡ್ಡಿದ್ದ. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು.

ನಗರದಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ಅಕ್ರಮವಾಗಿ ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗುಂಡುಗಳು, ಮಾದಕ ವಸ್ತುಗಳನ್ನು ಆರೋಪಿಗಳು ಇಟ್ಟುಕೊಂಡಿದ್ದರು. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕಲಿ ಯೋಗೀಶನ ಸಹಚರರಾದ ಇವರು, ಇನ್ನೋವಾ ಕಾರಿನಲ್ಲಿ ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿ ತಿರುಗಾಡುತ್ತಿದ್ದರು. ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಫಳ್ನೀರ್ ಬಳಿ ಬಂಧಿಸಿದ್ದಾರೆ. ಬಳಿಕ ನಡೆದ ವಿಚಾರಣೆಯಲ್ಲಿ ಕಾರ್ಕಳದ ದಿನೇಶ್‌ ಶೆಟ್ಟಿ ಎಂಬವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದು, ಇದಕ್ಕಾಗಿ 50 ಸಾವಿರ ರೂ ನೀಡಿ ಪಿಸ್ತೂಲ್ ಖರೀದಿಸಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಆರೋಪಿಗಳ ಪೈಕಿ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾ ಎಂಬಾತ ಈ ಹಿಂದೆ ನಗರದ ಸಂಜೀವ ಶೆಟ್ಟಿ ಬಟ್ಟೆ ಅಂಗಡಿಯಲ್ಲಿ ಶೂಟೌಟ್ ನಡೆಸಿದ ಪ್ರಕರಣ, ಪುತ್ತೂರಿನ ರಾಜಧಾನಿ ಜ್ಯುವೆಲ್ಲರಿ ಶೂಟೌಟ್ ಪ್ರಕರಣ, ಕೇರಳದ ಕಾಸರಗೋಡು ಜಿಲ್ಲೆಯ ಬೇವಿಂಜೆಯ ಪಿಡಬ್ಲೂಡಿ ಕಂಟ್ರಾಕ್ಟರ್ ಮನೆಗೆ ಶೂಟೌಟ್ ನಡೆಸಿದ ಪ್ರಕರಣ ಸಹಿತ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ಮಂಗಳೂರು ಉತ್ತರ, ಬರ್ಕೆ, ಉಳ್ಳಾಲ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಾರಂಟ್ ಜಾರಿಯಾಗಿದೆ. ಇನ್ನೋರ್ವ ಆರೋಪಿ ಮೊಹಮ್ಮದ್ ರಫೀಕ್ ಯಾನೆ ಮುಡಿಪು ರಫೀಕ್ ಎಂಬಾತನ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಳವು, ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಮಹಿಳಾ ಠಾಣೆಯಲ್ಲಿ ಪೋಕ್ಸೋ, ಮಂಗಳೂರು ಪೂರ್ವ ಠಾಣೆಯಲ್ಲಿ ದರೋಡೆಗೆ ಸಂಚು, ಕೊಣಾಜೆ ಠಾಣೆಯಲ್ಲಿ ಅಪಹರಣ, ದೇವಸ್ಥಾನ ಕಳವು ಪ್ರಕರಣ ಹಾಗೂ ಹಲ್ಲೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಹಾಗೂ ಕೇರಳದ ಮಂಜೇಶ್ವರ, ಕಣ್ಣೂರು ನಗರ ಪೊಲೀಸ್ ಠಾಣೆಗಳಲ್ಲಿ ಕಳವು ಹೀಗೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ.

ವಶಪಡಿಸಿಕೊಂಡ ಸೊತ್ತು (ETV Bharat)

ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಡಿ.ಕುಲಕರ್ಣಿ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಂ., ಸಿಸಿಬಿ ಪಿಎಸ್‌ಐ ಯವರಾದ ನರೇಂದ್ರ, ಶರಣಪ್ಪ ಭಂಡಾರಿ, ಹರೀಶ್ ಪದವಿನಂಗಡಿ, ಎಎಸ್‌ಐ ಮೋಹನ್ ಕೆ.ವಿ., ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಭಾಗವಹಿಸಿದ್ದರು.

ಇದನ್ನೂ ಓದಿ:ದೋಷ ನಿವಾರಣೆ ಪೂಜೆ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ: ಪೂಜಾರಿಯ ಬಂಧನ - Rape on Girl

ABOUT THE AUTHOR

...view details