ಕರ್ನಾಟಕ

karnataka

ETV Bharat / state

ಬೆಳಗಾವಿ: SP ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ದುಡ್ಡು ಕೇಳುತ್ತಿದ್ದ ಇಬ್ಬರು ವಶಕ್ಕೆ - FAKE FACEBOOK ACCOUNT

ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್​ ಖಾತೆ ತೆರೆದು ಹಣ ಕೇಳುತ್ತಿದ್ದ ಮಧ್ಯ ಪ್ರದೇಶ ಹಾಗೂ ರಾಜಸ್ಥಾನದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಆರೋಪಿಗಳು.
ಪೊಲೀಸರು ವಶಕ್ಕೆ ಪಡೆದ ಆರೋಪಿಗಳು (ETV Bharat)

By ETV Bharat Karnataka Team

Published : Nov 15, 2024, 1:00 PM IST

Updated : Nov 15, 2024, 1:09 PM IST

ಬೆಳಗಾವಿ:ಐಪಿಎಸ್​, ಐಎಎಸ್​​ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸಬುಕ್​ ಖಾತೆ ತೆರೆದು ಮೋಸ ಮಾಡುತ್ತಿದ್ದ ಇಬ್ಬರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಪೊಲೀಸ್​ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿಗಳು ಎಸ್ಪಿ ಸ್ನೇಹಿತರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬೆಂಗಳೂರಿನಿಂದ ಸಿಆರ್‌ಪಿಎಫ್​ ಅಧಿಕಾರಿಯೊಬ್ಬರು ಬೇರೆಡೆ ವರ್ಗಾವಣೆ ಆಗಿದ್ದಾರೆ. ಅವರ ಮನೆಯಲ್ಲಿ‌ 12 ಲಕ್ಷ ರೂ. ಮೌಲ್ಯದ ಫರ್ನಿಚರ್‌ಗಳು, ಟಿವಿ, ಫ್ರಿಡ್ಜ್​, ವಾಷಿಂಗ್​ ಮಷಿನ್ ಸೇರಿ ಮತ್ತಿತರ ವಸ್ತುಗಳಿವೆ. ಅವುಗಳನ್ನು ಕೇವಲ 90 ಸಾವಿರದಿಂದ 1.20 ಲಕ್ಷ ರೂ.ವರೆಗೆ ಕಡಿಮೆ ದರದಲ್ಲಿ ನಿಮಗೆ ಮಾರಾಟ ಮಾಡುತ್ತೇವೆ. ನನ್ನ ಬ್ಯಾಂಕ್​ ಅಕೌಂಟ್​ಗೆ ಹಣ ಹಾಕುವಂತೆ ಡಾ.ಭೀಮಾಶಂಕರ ಗುಳೇದ ಅವರ ಹೆಸರಿನಲ್ಲಿ ಸಂದೇಶ ಕಳಿಸಿದ್ದರು. ಈ ಕುರಿತು ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಗೆ ದೂರು ನೀಡಲಾಗಿತ್ತು.

ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಮಾಹಿತಿ. (ETV Bharat)

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪಿಐ ಸುನೀಲ ಕುಮಾರ ನಂದೀಶ್ವರ ನೇತೃತ್ವದ ತಂಡ ರಾಜಸ್ಥಾನಕ್ಕೆ ತೆರಳಿ ಮಧ್ಯ ಪ್ರದೇಶದ ವಿಜಯಕುಮಾರ ತಿವಾರಿ, ರಾಜಸ್ಥಾನದ ಅರ್ಬಾಜ್ ಖಾನ್ ಎಂಬವರನ್ನು ವಶಕ್ಕೆ ಪಡೆದು ಬೆಳಗಾವಿಗೆ ಕರೆ ತಂದಿದೆ.

"ಆರೋಪಿಯೊರ್ವ ಬೆಳಗಾವಿ ಜಿಲ್ಲಾ ಎಸ್ಪಿ ಹೆಸರಿನ ಫೇಸ್‌ಬುಕ್ ಖಾತೆಯ ಎಲ್ಲ ಹಿಂಬಾಲಕರಿಗೆ ಫ್ರೆಂಡ್​ ರಿಕ್ವೆಸ್ಟ್​​ ಕಳಿಸಿ ಫ್ರೆಂಡ್​​ ಮಾಡಿಕೊಂಡಿದ್ದ. ಬಳಿಕ ಒಂದು ದಿನ ನನ್ನ ಹುಟ್ಟುಹಬ್ಬವಿದೆ ಎಂದು ಪೋಸ್ಟ್ ಹಾಕಿದ್ದ. ವೈಯಕ್ತಿಕವಾಗಿ ಇನ್​ಬಾಕ್ಸ್​​ನಲ್ಲಿ ಶುಭಾಶಯ ಕಳಿಸಿದವರನ್ನೇ ಗುರಿಯಾಗಿಸಿಕೊಂಡು ಬೆಂಗಳೂರಿನಲ್ಲಿ ನನ್ನ ಓರ್ವ ಗೆಳೆಯ ಸಿಆರ್​ಪಿಎಫ್​ ಅಧಿಕಾರಿಯಿದ್ದು, ಇತ್ತೀಚೆಗೆ ಬೇರೆಡೆ ವರ್ಗಾವಣೆಯಾಗಿದ್ದಾನೆ. ಅವನ ಬಳಿಕ ಒಳ್ಳೊಳ್ಳೆ ಫರ್ನಿಚರ್ಸ್, ಎಲೆಕ್ಟ್ರಾನಿಕ್ ವಸ್ತುಗಳಿವೆ. ಇವುಗಳ ಮೌಲ್ಯ 12 ಲಕ್ಷ ರೂ. ಆಗುತ್ತದೆ. ಈ ಎಲ್ಲಾ ವಸ್ತುಗಳನ್ನು ನಾನು ತೆಗೆದುಕೊಂಡು ಹೋಗಲು ಕಷ್ಟವಾಗುತ್ತಿದ್ದು, 90 ಸಾವಿರ ರೂ. ಇಲ್ಲವೇ 1.20 ಲಕ್ಷ ರೂ‌. ಮಾರಾಟ ಮಾಡುತ್ತೇವೆ. ನೀವು ನಮ್ಮ ಬೆಳಗಾವಿ ಎಸ್ಪಿ ಅವರ ಒಳ್ಳೆಯ ಸ್ನೇಹಿತರು. ಹಾಗಾಗಿ, ನಿಮಗೆ ಕಡಿಮೆ ದರದಲ್ಲಿ ಇವುಗಳನ್ನು ಕೊಡುತ್ತಿದ್ದೇವೆ ಎಂದು ಮೆಸೇಜ್ ಹಾಕಿದ್ದಾನೆ. ಈ ಮೂಲಕ ಜನರಿಂದ ದುಡ್ಡು ಪಡೆಯಲು ಆರೋಪಿಗಳು ಪ್ರಯತ್ನಿಸಿದ್ದರು. ಇದು ನನ್ನ ಗಮನಕ್ಕೆ ಬರುತ್ತಿದ್ದಂತೆ ಫೇಕ್ ಫೇಸಬುಕ್ ಅಕೌಂಟ್ ವಿರುದ್ಧ ಎಫ್ಐಆರ್ ದಾಖಲಿಸಿದ್ದೇನೆ. ಅಲ್ಲದೇ ತನಿಖೆಯನ್ನೂ ಆರಂಭಿಸಲಾಗಿತ್ತು.‌ ಒಂದು ತಂಡವನ್ನು ಉತ್ತರ ಪ್ರದೇಶಕ್ಕೆ ಕಳಿಸಿಕೊಡಲಾಗಿತ್ತು. ಅಲ್ಲಿ ಒಬ್ಬ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ಆತನ ಮೊಬೈಲ್​​​ ನಂಬರ್ ಬಳಸಿಕೊಂಡು ರಾಜಸ್ಥಾನ ಮೂಲದ ವ್ಯಕ್ತಿ ಈ ಫೇಕ್ ಅಕೌಂಟ್ ತೆರೆದಿದ್ದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಬೆಳಗಾವಿಗೆ ಕರೆ ತರಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ" ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

"ಈ ಆರೋಪಿ ನನ್ನ ಹೆಸರಿನಲ್ಲಿ ಅಷ್ಟೇ ಅಲ್ಲದೇ ಗದಗ ಎಸ್ಪಿ ಬಿ.ಎಸ್.ನೇಮಗೌಡ, ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡ ಮತ್ತು ಐಎಎಸ್ ಅಧಿಕಾರಿಗಳಾದ ಎಂ.ಅರುಣಾ, ಅನುಕುಮಾರಿ ಅವರ ಹೆಸರಿನಲ್ಲೂ ಈ ರೀತಿ ನಕಲಿ ಫೇಸಬುಕ್ ಖಾತೆಗಳನ್ನು ತೆರೆದು ಜನರಿಗೆ ಮೋಸ ಮಾಡುತ್ತಿರುವುದು ವಿಚಾರಣೆ ವೇಳೆ ಸ್ಪಷ್ಟವಾಗಿದ್ದು, ಹೆಚ್ಚಿನ‌ ತನಿಖೆ ಮುಂದುವರಿಸಿದ್ದೇವೆ" ಎಂದು ಅವರು ತಿಳಿಸಿದರು.

"ಸಾಮಾಜಿಕ ಜಾಲತಾಣದಲ್ಲಿ ಯಾವ ಪೊಲೀಸ್‌ ಅಧಿಕಾರಿಗಳೂ ಹಣ ಕೇಳುವುದಿಲ್ಲ. ಎಲ್ಲರಿಗೂ ಸರ್ಕಾರ ಒಳ್ಳೆಯ ಸಂಬಳ ನೀಡುತ್ತದೆ. ಅಲ್ಲದೇ ಇದು ಕೇವಲ ಅಧಿಕಾರಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇನ್ನು ಸಾರ್ವಜನಿಕರಿಗೆ ದುಡ್ಡಿನ ಅವಶ್ಯಕತೆ ಇದ್ದರೆ ವಯಕ್ತಿಕವಾಗಿ ಭೇಟಿಯಾಗಿ ದುಡ್ಡು ಕೇಳುತ್ತಾರೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಯಾರೂ ಕೇಳುವುದಿಲ್ಲ. ಹಾಗಾಗಿ, ಈ ರೀತಿ ಆನ್​ಲೈನ್​ನಲ್ಲಿ ದುಡ್ಡು ಕೇಳಿದವರಿಗೆ ಯಾವುದೇ ಕಾರಣಕ್ಕೂ ಯಾರೂ ದುಡ್ಡು ಕೊಟ್ಟು, ಮೋಸ ಹೋಗಬೇಡಿ" ಎಂದು ಸಾರ್ವಜನಿಕರಿಗೆ ಡಾ.ಭೀಮಾಶಂಕರ ಗುಳೇದ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ:ಹಾವೇರಿ: ಉಪಚುನಾವಣೆ ಮುಗಿದ ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್ ಪತ್ತೆ

Last Updated : Nov 15, 2024, 1:09 PM IST

ABOUT THE AUTHOR

...view details