ಹುಬ್ಬಳ್ಳಿ:ಮಂಗಳೂರು ಮೂಲದ ಇಬ್ಬರು ದರೋಡೆಕೋರರ ಕಾಲಿಗೆ ಇಲ್ಲಿನ ಸಿಸಿಬಿ ಪೊಲೀಸರು ಗುಂಡು ಹಾರಿಸಿರುವ ಘಟನೆ ಭಾನುವಾರ ನಡೆದಿದೆ. ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೋ ಫಾರೂಕ್ ಎಂಬ ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ.
ಭರತ್ ಮತ್ತು ಫಾರುಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಈ ತಂಡದಲ್ಲಿ 15 ಸದಸ್ಯರಿದ್ದಾರೆ. ನವೆಂಬರ್ 8ರಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಹತ್ತಿರ ಮಹಾರಾಷ್ಟ್ರದ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಎಂಬವರ ಕಾರು ಅಡ್ಡಗಟ್ಟಿ ಚಾಲಕನಿಗೆ ಬೆದರಿಕೆ ಹಾಕಿ ದರೋಡೆ ಮಾಡಿದ್ದರು. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಇವರಿಬ್ಬರನ್ನು ಬಂಧಿಸಿದ್ದರು. ನಿನ್ನೆ ಸ್ಥಳ ಮಹಜರು ಮಾಡಲು ಕರೆದುಕೊಂಡ ಹೋಗಿದ್ದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಈ ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.