ತುಮಕೂರು:ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಲ್ಪತರು ನಾಡು ತುಮಕೂರು ಕ್ಷೇತ್ರ ಈ ಬಾರಿ ಬಿಜೆಪಿಯ ವಿ.ಸೋಮಣ್ಣ ಹಾಗೂ ಕಾಂಗ್ರೆಸ್ನ ಮುದ್ದಹನುಮೇಗೌಡ ನಡುವೆ ನೇರ ಪೈಪೋಟಿ ಕಂಡಿದೆ. ಅದರಲ್ಲೂ, ಚುನಾವಣೆಯಲ್ಲಿ ಸ್ಥಳೀಯ ಮತ್ತು ವಲಸಿಗ ಅಸ್ತ್ರ ಪ್ರಯೋಗ ಆಗಿರುವುದು ವಿಶೇಷ. ಹೀಗಾಗಿ ಗೆಲ್ಲೋರ್‍ಯಾರು?, ಸೋಲೋರ್‍ಯಾರು? ಎಂಬ ಲೆಕ್ಕಾಚಾರ ಜೋರಾಗಿದೆ.
ತುಮಕೂರು ಲೋಕಸಭೆ ಕ್ಷೇತ್ರವು 1952 ರಿಂದ 2019ರವರೆಗೆ 17 ಚುನಾವಣೆಗಳನ್ನು ಕಂಡಿದೆ. ಈ ಬಾರಿ ಕಾಂಗ್ರೆಸ್ನ ಮಾಜಿ ಸಂಸದ ಮುದ್ದಹನುಮೇಗೌಡ ಗೆದ್ದು ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಹಂಬಲದಲ್ಲಿದ್ದಾರೆ. ಮತ್ತೊಂದೆಡೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯ ವಿ.ಸೋಮಣ್ಣ ರಾಜಕೀಯ ಜೀವನದ ಕಠಿಣ ಅದೃಷ್ಟ ಪರೀಕ್ಷೆ ಎದುರಿಸಿದ್ದಾರೆ. ಈ ಬಾರಿ ಶೇ.78.05ರಷ್ಟು ಮತದಾನವಾಗಿದೆ. 6,49,934 ಪುರುಷರು ಮತ್ತು 6,46,767 ಮಹಿಳೆಯರು ಹಾಗೂ 19 ಮಂದಿ ಇತರರು ಸೇರಿ ಒಟ್ಟಾರೆ 12,96720 ಮಂದಿ ಮತ ಚಲಾಯಿಸಿದ್ದಾರೆ.
ಸ್ಥಳೀಯ-ವಲಸಿಗ ಅಸ್ತ್ರ: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಆಗಿನ ಕಾಂಗ್ರೆಸ್ನ ಹಾಲಿ ಸಂಸದ ಮುದ್ದಹನುಮೇಗೌಡ ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ಆದರೆ, ಮೈತ್ರಿ ಅಭ್ಯರ್ಥಿ ದೇವೇಗೌಡರಿಗೆ ಸೋಲಾಗಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎಸ್.ಬಸವರಾಜ್ ಗೆದ್ದಿದ್ದರು. ಆದರೆ, ಈ ಬಾರಿ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಚಿತ್ರಣ ಮತ್ತು ಮೈತ್ರಿ ಪಕ್ಷಗಳು ಬದಲಾಗಿವೆ.
ಅಂದು ಕಾಂಗ್ರೆಸ್ ಜೊತೆಗಿದ್ದ ಜೆಡಿಎಸ್, ಈ ಬಾರಿ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿದೆ. ಜೊತೆಗೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುದ್ದಹನುಮೇಗೌಡ ಮತ್ತೆ ಕಾಂಗ್ರೆಸ್‌ನಿಂದ ಮರಳಿ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ, ಹಾಲಿ ಸಂಸದ ಬಸವರಾಜ್ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಬಿಜೆಪಿ ವಿ.ಸೋಮಣ್ಣಗೆ ಮಣೆ ಹಾಕಿದೆ. ಇದೇ ಕಾರಣಕ್ಕೆ ಈ ಚುನಾವಣೆಯಲ್ಲಿ ಸ್ಥಳೀಯ ಹಾಗೂ ವಲಸಿಗ ಅಸ್ತ್ರ ಪ್ರಯೋಗಕ್ಕೆ ತುಮಕೂರು ಸಾಕ್ಷಿಯಾಗಿ ಚುನಾವಣಾ ಪ್ರಚಾರದ ದಿಕ್ಕೇ ಬದಲಾಗಿತ್ತು.