ಮೂಲಭೂತ ಸೌಕರ್ಯ ವಂಚಿತ ಆದಿವಾಸಿಗಳಿಂದ ಚುನಾವಣೆ ಬಹಿಷ್ಕಾರ ಚಿಕ್ಕಮಗಳೂರು:ಸರ್ಕಾರ ನೀಡುವ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಪರದಾಟದಲ್ಲೇ ಜೀವನ ನಡೆಸುತ್ತಿರುವ ಆದಿವಾಸಿಗಳು ಲೋಕಸಭೆ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ. ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಕ್ಕಣಕ್ಕಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಆದಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಶೇ.70ರಷ್ಟು ಅರಣ್ಯ ಪ್ರದೇಶದಿಂದ ಕೂಡಿರುವ ಜಿಲ್ಲೆ ಅತೀ ಹೆಚ್ಚು ಆದಿವಾಸಿ ಕುಟುಂಬಗಳಿಗೆ ಆಶ್ರಯ ತಾಣವಾಗಿದೆ. ಇಂದಿಗೂ ಆದಿವಾಸಿ ಕುಟುಂಬಗಳು ಪೂರ್ವಿಕರಂತೆ ಕಾಡಿನಂಚಿನಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಬಹುತೇಕ ಆದಿವಾಸಿಗಳು ವಾಸಿಸುವ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳೇ ಇನ್ನೂ ಸಿಕ್ಕಿಲ್ಲ. ಆ ಸಾಲಿನಲ್ಲಿ ಜಕ್ಕಣಕ್ಕಿ ಗ್ರಾಮವೂ ಒಂದು. ಇಲ್ಲಿನ ಹಾಡಿಗೆ ಹೋಗುವ ರಸ್ತೆ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ರಸ್ತೆ ಮಾಡಲು ಅಧಿಕಾರಿಗಳು ಮತ್ತು ಜನಪ್ರನಿಧಿಗಳು ಮುಂದಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.
ಚುನಾವಣೆಗಳ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡುವ ಅಧಿಕಾರಿಗಳು ರಸ್ತೆ ಕಾಮಗಾರಿ ನಡೆಸುತ್ತೇವೆ. ಆದಿವಾಸಿಗಳು ವಾಸಿಸುವ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುತ್ತೇವೆ ಎಂಬ ಭರವಸೆ ನೀಡುತ್ತಾರೆ. ಆದರೆ ಯಾವುದೇ ಸೌಕರ್ಯ ಸಿಕ್ಕಿಲ್ಲ. 15 ವರ್ಷದ ಹಿಂದೆ ರಸ್ತೆಗೆ ಜಲ್ಲಿ ಹಾಕಿರುವುದು ಹೊರತುಪಡಿಸಿ, ಮುಂದೇನಾಗಿದೆ ಎಂಬುದನ್ನು ನೋಡೋಕೆ ಯಾರೊಬ್ಬ ಅಧಿಕಾರಿ ಅಥವಾ ಜನ ಪ್ರತಿನಿಧಿಯೂ ಆಗಮಿಸಿಲ್ಲ. ಹೀಗಾಗಿ ಈ ಬಾರಿ ಮತದಾನ ಮಾಡುವುದಿಲ್ಲ. ಮತದಾನ ಮಾಡಬೇಕೆಂದರೆ ಲಿಖಿತ ರೂಪದಲ್ಲಿ ಅಧಿಕಾರಿಗಳು ಭರವಸೆ ನೀಡಬೇಕು. ಜಿಲ್ಲಾಡಳಿತ ಮತ್ತು ರಾಜ್ಯ ಚುನಾವಣಾ ಇಲಾಖೆಗೆ ಬಹಿಷ್ಕಾರದ ಎಚ್ಚರಿಕೆಯ ಪತ್ರವನ್ನು ಕಳಿಸಲು ಸಿದ್ಧವಿದ್ದೇವೆ ಎಂದು ಗ್ರಾಮಸ್ಥರಾದ ಶ್ರೀಕಾಂತ್ ಹೇಳಿದರು.
ಇಲ್ಲಿ ಸುಮಾರು ಐದು ತಲೆಮಾರಿನಿಂದ ನಾವು ವಾಸ ಮಾಡುತ್ತಿದ್ದೇವೆ. ನಮಗೆ ಮುಖ್ಯವಾಗಿ ರಸ್ತೆ, ಕುಡಿಯುವ ನೀರು ಮತ್ತು ಬೀದಿ ದೀಪಗಳ ವ್ಯವಸ್ಥೆ ಬೇಕು. ಕಾಡಿನಂಚಿನಲ್ಲಿರುವ ನಮಗೆ ಇಲ್ಲಿವರೆಗೆ ಸರ್ಕಾರದಿಂದ ಯಾವುದೇ ರೀತಿಯ ಮೂಲಕ ಸೌಕರ್ಯಗಳು ಸಿಕ್ಕಿಲ್ಲ. ಚುನಾವಣೆ ಸಂದರ್ಭದಲ್ಲಿ ಬರುವ ಜನಪ್ರತಿನಿಧಿಗಳು ಗೆದ್ದ ನಂತರ ಈ ಕಡೆ ಬರುವುದಿಲ್ಲ. ನಾವು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲಾ-ಕಾಲೇಜು ಮತ್ತು ಕೆಲಸಕ್ಕೆ ಹೋಗುವವರು ರಸ್ತೆ ಇಲ್ಲದೇ ಕಾಡಿನಲ್ಲಿ ಬರಬೇಕು. ಆನೆ ಹಾಗು ಇನ್ನಿತರ ಪ್ರಾಣಿಗಳ ದಾಳಿ ಭಯವಿದೆ. ಹೀಗಾಗಿ ಅದಷ್ಟು ಬೇಗ ಸರ್ಕಾರ ಮತ್ತು ಅಧಿಕಾರಿಗಳು ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರಾದ ಅಂಬಿಕ ತಿಳಿಸಿದರು.
ಇದನ್ನೂ ಓದಿ:'ರಸ್ತೆ, ಸೇತುವೆ ಮಾತ್ರವಲ್ಲ ಯುವಕರಿಗೆ ಮದುವೆಯೂ ಇಲ್ಲ': ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು