ಕರ್ನಾಟಕ

karnataka

ETV Bharat / state

ಭವಿಷ್ಯದಲ್ಲಿ ಚಿಕಿತ್ಸಾ ಕ್ರಮವೇ ಬದಲಾಗಲಿದೆ: ಐಐಎಸ್​ಸಿ ವಿಜ್ಞಾನಿ ಪ್ರೊ.ದೀಪಕ್

ಅಗತ್ಯಕ್ಕೆ ತಕ್ಕಂತೆ ಎಐ ಚಾಲಿತ ವ್ಯಕ್ತಿ ನಿರ್ದಿಷ್ಟಿತ ಚಿಕಿತ್ಸೆ ಪ್ರಚಲಿತಕ್ಕೆ ಬರಲಿದೆ ಎಂದು ಐಐಎಸ್​ಸಿ ವಿಜ್ಞಾನಿ ಪ್ರೊ.ದೀಪಕ್ ಹೇಳಿದರು.

BENGALURU TECH SUMMIT
ಜೈವಿಕ ತಂತ್ರಜ್ಞಾನದ ನಾವೀನ್ಯತೆ ಕುರಿತ ಸಂವಾದ (ETV Bharat)

By ETV Bharat Karnataka Team

Published : 6 hours ago

ಬೆಂಗಳೂರು: ಜೈವಿಕ ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದು, ಎಲ್ಲರಿಗೂ ಒಂದೇ ಚಿಕಿತ್ಸೆ ಎಂಬ ಪರಿಕಲ್ಪನೆ ಬದಲಾಗಿ, ಅಗತ್ಯಕ್ಕೆ ತಕ್ಕಂತೆ ವ್ಯಕ್ತಿ ನಿರ್ದಿಷ್ಟಿತ ಚಿಕಿತ್ಸಾ ಪದ್ಧತಿ ಪ್ರಚಲಿತಕ್ಕೆ ಬರಲಿದೆ ಎಂದು ಐ.ಐ.ಎಸ್.ಸಿ ವಿಜ್ಞಾನಿ ಪ್ರೊ.ದೀಪಕ್ ಕೆ.ಸೈನಿ ಪ್ರತಿಪಾದಿಸಿದರು.

ಟೆಕ್ ಶೃಂಗಸಭೆಯ ಎರಡನೇ ದಿನ ನಡೆದ ಸ್ವಾಸ್ಥ್ಯ, ದೀರ್ಘಾಯುಷ್ಯ ಮತ್ತು ಬುದ್ಧಿಮತ್ತೆಯಲ್ಲಿ ಜೈವಿಕ ತಂತ್ರಜ್ಞಾನದ ನಾವೀನ್ಯತೆ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಎಐ ಚಾಲಿತ ರೋಗನಿರ್ಣಯ, ಒಮಿಕ್ಸ್ ದತ್ತಾಂಶ ಮತ್ತು ಪ್ರತಿ ರೋಗಿಗೆ ಹೊಂದಿಕೊಳ್ಳುವ ನೈಜ ಸಮಯದ ನಿಗಾ ನೆರವಿನೊಂದಿಗೆ ಭವಿಷ್ಯದಲ್ಲಿ ಚಿಕಿತ್ಸಾ ಕ್ರಮವೇ ಬದಲಾಗಲಿದೆ. ವ್ಯಕ್ತಿ ನಿರ್ದಿಷ್ಟಿತವಾದ ಚಿಕಿತ್ಸೆ (ಕಸ್ಟಮೈಸ್ಡ್ ಟ್ರೀಟ್​ಮೆಂಟ್) ಬರಲಿದೆ ಎಂದರು.

ಜಗತ್ತಿನಲ್ಲಿ ವೃದ್ಧರ ಸಂಖ್ಯೆ 2050ರ ವೇಳೆಗೆ 2.1 ಶತಕೋಟಿಯಾಗಲಿದ್ದು, ಆ ವೇಳೆಗೆ ಭಾರತದಲ್ಲಿ ವೃದ್ಧರ ಸಂಖ್ಯೆ 34.2 ಕೋಟಿ ತಲುಪಲಿದೆ. ವಯಸ್ಸಿಗೆ ಸಂಬಂಧಿಸಿದ ಬಾಧೆಗಳ ಚಿಕಿತ್ಸೆಗೆ ಬೇಡಿಕೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಗಮನ ಹರಿದಿದ್ದು, ವೃದ್ಧಾಪ್ಯದ ಆರೋಗ್ಯಸೇವೆಯತ್ತ ದೊಡ್ಡಮಟ್ಟದಲ್ಲಿ ಹೂಡಿಕೆ ನಡೆಯುತ್ತಿದೆ ಎಂರು.

ನಿಮ್ಹಾನ್ಸ್ ಪ್ರೊಫೆಸರ್ ಸಂಜೀವ್ ಜೈನ್ ಮಾತನಾಡಿ, ವಯಸ್ಸಾಗುವಿಕೆಗೆ ಸಂಬಂಧಿಸಿದಂತೆ ಮೂಲಭೂತ ಸಂಶೋಧನೆ ಹಾಗೂ ದೀರ್ಘಾಯುಷ್ಯ ಉತ್ತೇಜಿಸುವ ಸಾಧ್ಯತೆ ಬಗ್ಗೆ ಅಧ್ಯಯನಗಳು ನಡೆಯುತ್ತಿದೆ. ವೈದ್ಯಕೀಯ ಅಧ್ಯಯನದ ಫಲಿತಾಂಶಗಳನ್ನು ಗುರುತಿಸುವುದು, ವೈದ್ಯಕೀಯ ಮಾನದಂಡಗಳನ್ನು ನಿಗದಿಗೊಳಿಸುವುದು ಫಲಿತಾಂಶಗಳನ್ನು ವೈದ್ಯಕೀಯ ಅಭ್ಯಾಸದೊಂದಿಗೆ ಸಮಗ್ರಗೊಳಿಸುವುದು ನಂತರದ ಹಂತವಾಗಿರುತ್ತದೆ ಎಂದರು.

ಮಿದುಳಿನ ವಯಸ್ಸಾಗುವಿಕೆಯನ್ನು ತಡೆಯಲು ಜೆನೆಟಿಕ್ಸ್ ಅರ್ಥಮಾಡಿಕೊಳ್ಳುವ ಮೂಲಕ ಸಾಧ್ಯವೇ ಎಂಬ ಕುರಿತು ಕೂಡ ಅಧ್ಯಯನ ನಡೆದಿದೆ. ಮಾನಸಿಕ ಆರೋಗ್ಯಕ್ಕೆ ಕಾರಣವಾಗುವ ಜೆನೆಟಿಕ್ಸ್ ಅಂಶಗಳ ಮೇಲೂ ಸಂಶೋಧನೆಗಳು ಆಗುತ್ತಿವೆ. ಮುಂದಿನ 20 ವರ್ಷಗಳಲ್ಲಿ ಬುದ್ಧಿಮಾಂದ್ಯತೆಯ ಪ್ರಮಾಣ ಹೆಚ್ಚಲಿದ್ದು, ಇದಕ್ಕೆ ಸಮರ್ಪಕ ಚಿಕಿತ್ಸೆ ಅಭಿವೃದ್ಧಿಪಡಿಸುವ ದಿಸೆಯಲ್ಲಿ ದತ್ತಾಂಶದ ಕ್ರೋಢೀಕರಣ ಆಗಬೇಕಿದೆ. ಅಲ್ಲದೇ ಜೈವಿಕ ತಂತ್ರಜ್ಞಾನ ಕ್ಷೇತ್ರದ ದತ್ತಾಂಶ ನಿರ್ವಹಣೆಯಲ್ಲಿ ಗೋಪ್ಯತೆಯು ಅತಿಮುಖ್ಯ ಅಂಶವಾಗಿದೆ. ಉದ್ಯಮಗಳು ಅದನ್ನು ಅನುಸರಿಸಬೇಕು. ಸಮರ್ಪಕ ಆರೋಗ್ಯ ಸೇವೆಗೆ ದತ್ತಾಂಶ ಸಂಗ್ರಹ ತುಂಬಾ ಅಗತ್ಯ. ವ್ಯಕ್ತಿ ನಿರ್ದಿಷ್ಟಿತ ದತ್ತಾಂಶ ಇದ್ದಾಗ ಔಷಧಗಳ ಅಡ್ಡಪರಿಣಾಮಗಳನ್ನು ತಗ್ಗಿಸುವುದು ಸುಲಭವಾಗಲಿದೆ ಎಂದು ಸಂಜೀವ್ ಜೈನ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಬೆಂಗಳೂರು ಟೆಕ್ ಸಮ್ಮಿಟ್ 2024: ಇನ್ಫೋಸಿಸ್‌ಗೆ 'ಕರ್ನಾಟಕದ ಐಟಿ ರತ್ನ' ಪ್ರಶಸ್ತಿ

ABOUT THE AUTHOR

...view details