ಬೆಂಗಳೂರು:ನಗರದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಮತ್ತೆರಡು ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಪಡೆಯಲಾಗಿದೆ. ಆ ಮೂಲಕ ಅರಣ್ಯ ಅಧಿಕಾರಿಗಳು ಬೆಂಗಳೂರಲ್ಲಿ ಈವರೆಗೆ 103 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿದ್ದಾರೆ.
ಯಲಹಂಕ ಬಳಿಯ ಮಾರಸಂದ್ರದ ಗಸ್ತು ಸರ್ವೆ ನಂ.182ರಲ್ಲಿ ಒತ್ತುವರಿ ಮಾಡಲಾಗಿದ್ದ 2 ಎಕರೆ 10 ಗುಂಟೆ ಅರಣ್ಯ ಜಮೀನನ್ನು ತೆರವು ಮಾಡಿ, ಅಲ್ಲಿ ಸ್ಥಳೀಯ ಜಾತಿಯ ಸಸಿಗಳನ್ನು ನೆಟ್ಟು ಅರಣ್ಯ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಭೈರಾರೆಡ್ಡಿ ಎಂಬವರು ಅರಣ್ಯ ಇಲಾಖೆಗೆ ಸೇರಿದ 2.10 ಎಕರೆ ಜಮೀನು ಒತ್ತುವರಿ ಮಾಡಿದ್ದರು. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಬೆಂಗಳೂರು ನಗರ ಅರಣ್ಯಾಧಿಕಾರಿಗಳು ಜೆಸಿಬಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 40 ಕೋಟಿ ರೂ.ಗಳಿಗೂ ಅಧಿಕ ಎಂದು ಹೇಳಲಾಗಿದೆ.
ವರ್ಷದಲ್ಲಿ 103 ಎಕರೆ ಒತ್ತುವರಿ ತೆರವು:ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು, ಒತ್ತುವರಿ ಮಾಡಿರುವ ಅರಣ್ಯ ಭೂಮಿಯ ತೆರವಿಗೆ ಕ್ರಮ ವಹಿಸುವಂತೆ ಅರಣ್ಯ ಸಚಿವರು ಸ್ಪಷ್ಟ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಈವರೆಗೆ 103 ಎಕರೆಗೂ ಹೆಚ್ಚು ಒತ್ತುವರಿ ತೆರವುಗೊಳಿಸಿದ್ದಾರೆ.