ಮೈಸೂರು:ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ದಸರಾ ಪಂಜಿನ ಕವಾಯತು ನೆರೆದಿದ್ದ ಜನರನ್ನು ರೋಮಾಂಚನಗೊಳಿಸಿತು. ಪಂಜಿನ ಕವಾಯತಿನಲ್ಲಿ ನಡೆದ ನಾನಾ ಸಾಹಸ ದೃಶ್ಯಗಳನ್ನು ಕಣ್ತುಂಬಿಕೊಂಡು ಪ್ರೇಕ್ಷಕರು ಮೈಮರೆತರು.
ಧೂಳೆಬ್ಬಿಸಿದ ಬೈಕ್ ಸ್ಟಂಟ್ಸ್:ಮಿಲಿಟರಿ ಪೊಲೀಸರ ಶ್ವೇತಾಶ್ವ ತಂಡದ ಬೈಕ್ ಕಸರತ್ತು ನೋಡುಗರ ಮೈನವಿರೇಳಿಸಿತು. ಬೈಕ್ನಲ್ಲಿ ನಾನಾ ಭಂಗಿಗಳಲ್ಲಿ ಕುಳಿತು, ನಿಂತು ಸಾಹಸ ಮೆರೆದ ಸೈನಿಕರು ವೀಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು. ಬೈಕಿನಲ್ಲೇ ನಿಂತು, ವ್ಯಾಯಾಮ ಮಾಡುತ್ತಾ, ಏಣಿ ಏರುತ್ತಾ, ಒಂಟಿ ಕಾಲಿನಲ್ಲಿ ಬೈಕ್ ಮೇಲೆ ಕಸರತ್ತು ಪ್ರದರ್ಶಿಸಿದರು. ತಂಡದ ಎಲ್ಲ ಸದಸ್ಯರೂ ವಿವಿಧ ಕಸರತ್ತಿನೊಂದಿಗೆ ಮಿಂಚಿನ ವೇಗದಲ್ಲಿ ಬೈಕ್ ಚಲಾಯಿಸಿ ಎದೆ ಝಲ್ಲೆನ್ನುವಂತೆ ಮಾಡಿದರು.
ಡ್ರೋನ್ ಶೋ ಆಕರ್ಷಣೆ:ಡ್ರೋನ್ ಪ್ರದರ್ಶನವು ರಾಷ್ಟ್ರಧ್ವಜ, ಚಂದ್ರಯಾನ, ಚಂದ್ರಯಾನ ಲ್ಯಾಂಡಿಂಗ್, ಸೌರವ್ಯೂಹ, ವಿಶ್ವ ಭೂಪಟ, ವಿಶ್ವ ಭೂಪಟದಲ್ಲಿ ಭಾರತ, ಸೈನಿಕರು, ಸೈನಿಕರು ಸೆಲ್ಯೂಟ್ ಮಾಡುವುದು, ಕರ್ನಾಟಕದ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಹದ್ದು, ಹುಲಿ, ಸಿಂಹದ ಮೇಲೆ ಕುಳಿತಿರುವ ಚಾಮುಂಡೇಶ್ವರಿ ಸೇರಿದಂತೆ ಹಲವು ವಿನ್ಯಾಸಗಳೊಂದಿಗೆ ಜನರಿಗೆ ಮುದ ನೀಡಿತು. ಒಮ್ಮೆಲೆ ಹಕ್ಕಿಗಳಂತೆ ಆಕಾಶದಲ್ಲಿ ಹಾರಲು ಶುರು ಮಾಡಿದ 1,500 ಡ್ರೋನ್‌ಗಳು ಪ್ರೇಕ್ಷಕರ ಚಿತ್ತವನ್ನು ತಮ್ಮತ್ತ ಸೆಳೆದವು.
ಟೆಂಟ್ ಪೆಗ್ಗಿಂಗ್:ಅಶ್ವಾರೋಹಿ ದಳದ ಪೊಲೀಸರು ಪ್ರಸ್ತುತಪಡಿಸಿದ ಮ್ಯೂಸಿಕಲ್ ರೈಡ್, ಶೋ ಜಂಪಿಂಗ್ ಮತ್ತು ಟೆಂಟ್ ಪೆಗ್ಗಿಂಗ್‌ಗಳು ಪ್ರೇಕ್ಷಕರಿಗೆ ರೋಚಕ ಅನುಭವ ನೀಡಿದವು. ಇದೇ ಮೊದಲ ಬಾರಿಗೆ ಮ್ಯೂಸಿಕಲ್ ರೈಡ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೌಂಟೆಡ್ ಪೊಲೀಸರು ಒಮ್ಮೆಲೆ 30 ಕುದುರೆಗಳಿಂದ ವಿವಿಧ ನಡಿಗೆ ನಡೆಸಿದರು. ಕುದುರೆಗಳು ಹಿನ್ನೆಲೆ ಸಂಗೀತವನ್ನು ಆಲಿಸುತ್ತಲೇ ವಿವಿಧ ನಡೆಯನ್ನು ಪ್ರದರ್ಶಿಸಿದವು.
ಪಂಜಿನ ಕವಾಯತಿನಲ್ಲಿ 14 ವರ್ಷಗಳ ಬಳಿಕ ಸಿಕ್ಸ್ ಬಾರ್ ಜಂಪಿಂಗ್ ಕೂಡ ನಡೆಯಿತು. ಕುದುರೆಗಳ ಮೇಲೆ ಕುಳಿತು, ಕೆಳಗೆ ನೆಟ್ಟಿದ್ದ ಉರಿಯುವ ಪಂಜುಗಳನ್ನು ಈಟಿಯಲ್ಲಿ ಕಿತ್ತುಕೊಳ್ಳುವ ಜಾಣ್ಮೆಯನ್ನು ನೋಡಿದ ಪ್ರೇಕ್ಷಕರು ಆಶ್ಚರ್ಯಚಕಿತರಾದರು. ಜೊತೆಗೆ ಒಬ್ಬೊಬ್ಬರಾಗಿ ಭೂಮಿಯಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ವೇಗದ ಕುದುರೆ ಸವಾರಿ ಮೂಲಕವೇ ಈಟಿಯಿಂದ ಕಿತ್ತೊಯ್ದರೆ, ಕಡೆಯಲ್ಲಿ ಒಟ್ಟೊಟ್ಟಿಗೆ ಟೆಂಟ್ ಪೆಗ್ಗಿಂಗ್ ಮಾಡಿದ್ದಂತೂ ರೋಚಕವಾಗಿತ್ತು.
ಪಂಜಿನ ವಿವಿಧ ಆಕೃತಿ:ಕರ್ನಾಟಕ ಪೊಲೀಸ್ ಇಲಾಖೆಯ ಪಂಜಿನ ಕವಾಯತು ಕಾರ್ಯಕ್ರಮ ನೋಡಿ ಜನರು ಖುಷಿಪಟ್ಟರು. 300 ಪೊಲೀಸರು, 600 ಪಂಜುಗಳನ್ನು ಹಿಡಿದು ಮನಮೋಹಕ ದೃಶ್ಯಗಳು, ಅಕ್ಷರಾಕೃತಿಗಳನ್ನು ರಚಿಸಿದರು. ಪೊಲೀಸ್ ಬ್ಯಾಂಡ್ ಹಿಮ್ಮೇಳದಲ್ಲಿ ವಿವಿಧ ದೈಹಿಕ ಕಸರತ್ತುಗಳನ್ನು ಮಾಡುತ್ತಾ ವಿವಿಧ ವಿನ್ಯಾಸದ ಆಕೃತಿಗಳನ್ನು ಮೂಡಿಸಿದರು. ರಿಂಗ್ ರೋಟೇಷನ್, ಸುದರ್ಶನ ಚಕ್ರ, ಸ್ವಸ್ತಿಕ್, ಸ್ವಾಗತ, ಸುವರ್ಣ ಕರ್ನಾಟಕ 50, ಮೈಸೂರು ದಸರಾ 414, ಜೈ ಚಾಮುಂಡಿ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕರ್ನಾಟಕ ಪೊಲೀಸ್ ಆಲ್ವೆಸ್ ವಿತ್ ಯು, ಜೈ ಹಿಂದ್, ಥ್ಯಾಂಕ್ಯೂ ಅಕ್ಷರದ ಆಕೃತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.