ಮಂಗಳೂರು: ದೇಶದೆಲ್ಲೆಡೆ ನಾಳೆ (ಗುರುವಾರ) ಈದ್ ಉಲ್ ಫಿತರ್ ಆಚರಣೆ ನಡೆಲಿದ್ದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು ರಂಜಾನ್ ಆಚರಿಸಲಾಗುತ್ತಿದೆ.
ಮಂಗಳವಾರ ಚಂದ್ರ ದರ್ಶನವಾದ ಮಾಹಿತಿ ಆಧರಿಸಿ ಮಂಗಳೂರು ಕೇಂದ್ರ ಜುಮ್ಮಾ ಮಸೀದಿ ಬಂದರು ದಕ್ಷಿಣಕನ್ನಡ ಜಿಲ್ಲಾ ಖಾಝಿಯವರಾದ ತ್ವಾಕ ಅಹಮದ್ ಮುಸ್ಲಿಯಾರ್ ಅವರು ಬುಧವಾರ (ಇಂದು) ಈದ್ ಉಲ್ ಫಿತರ್ ಆಚರಿಸುವುದು ಎಂದು ಘೋಷಿಸಿದ್ದರು. ಹೀಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು ರಂಜಾನ್ ಆಚರಣೆ ನಡೆಯುತ್ತಿದೆ.
ಒಂದು ತಿಂಗಳ ಉಪವಾಸ ತೊರೆದ ಮುಸ್ಲಿಮರು ಇಂದು ಬೆಳಗ್ಗೆ ಮಸೀದಿಗೆ ತೆರಳಿ ನಮಾಜ್ ಸಲ್ಲಿಸಿದರು. ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸ್ಪೀಕರ್ ಯು.ಟಿ. ಖಾದರ್ ಅವರು ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಮಸೀದಿಯಲ್ಲಿ ನಡೆದ ನಮಾಜ್ನಲ್ಲಿ ಪಾಲ್ಗೊಂಡರು.
ದಕ್ಷಿಣ ಕನ್ನಡ - ಉಡುಪಿಯಲ್ಲಿ ಸರ್ಕಾರಿ ರಜೆ:ರಂಜಾನ್ ಹಿನ್ನೆಲೆ ಇಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ನಿಗದಿತ ಪರೀಕ್ಷೆಗಳು ಬಿಟ್ಟು, ಉಳಿದಂತೆ ಸರಕಾರಿ ಕಚೇರಿಗಳು ಮುಚ್ಚಿರುತ್ತವೆ. ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಮನವಿಯಂತೆ ಸರಕಾರದ ಅಧೀನ ಕಾರ್ಯದರ್ಶಿ ವಿಜಯ ಕುಮಾರ್ ಎಚ್.ಬಿ. ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, "ಪ್ರತಿಯೊಂದು ಹಬ್ಬದ ಸಂದೇಶವೂ ನಮ್ಮನ್ನು ನಾವು ತಿದ್ದಿಕೊಂಡು ಸರಿಯಾದ ದಾರಿಯಲ್ಲಿ ಸಾಗುವುವಾಗಿದೆ. ಈದ್ ಉಲ್ ಫಿತರ್, ಯುಗಾದಿ, ಈಸ್ಟರ್ ಹಬ್ಬದ ಸಂದೇಶಗಳು ಕೂಡ ಇದೇ ಆಗಿದೆ. ತ್ಯಾಗದ ಸಂಕೇತವಾಗಿ ಈದುಲ್ ಫಿತರ್ ಹಿನ್ನೆಲೆಯಲ್ಲಿ ಹಸಿವನ್ನು ಮಾತ್ರ ಅನುಭವಿಸದೆ, ತ್ಯಾಗ ಸಹನೆ ಮೊದಲಾದವುಗಳನ್ನು ಬಗೆಹರಿಸುವ ವ್ಯಕ್ತಿತ್ವ ರೂಪಿಸಿಕೊಳ್ಳುವುದಾಗಿದೆ. ಜಿಲ್ಲೆಯಲ್ಲಿ ಎಲ್ಲರೂ ಈದುಲ್ ಫಿತರ್, ಯುಗಾದಿ ಹಾಗೂ ಈಸ್ಟರ್ ಹಬ್ಬದ ಸಂಭ್ರಮದಲ್ಲಿ ಸಂತಸದಲ್ಲಿದ್ದಾರೆ" ಎಂದರು.
ಇದನ್ನೂ ಓದಿ:ನಿನ್ನೆ ಬಾನಂಗಳದಲ್ಲಿ ದರ್ಶನ ಕೊಡದ ಚಂದ್ರ: ಭಾರತದಲ್ಲಿ ನಾಳೆ ರಂಜಾನ್ ಆಚರಣೆ - Eid al Fitr