ಮಂಗಳೂರು:ತಿರುವನಂತಪುರ - ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಮಂಗಳೂರಿನವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕುರಿತು ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.
ಈವರೆಗೆ ವಂದೇ ಭಾರತ್ ರೈಲು ತಿರುವನಂತಪುರ-ಕಾಸರಗೋಡು ನಡುವೆ ಸಂಚರಿಸುತ್ತಿತ್ತು. ಇದೀಗ ಈ ರೈಲು ಮಂಗಳೂರುವರೆಗೆ ಸೇವೆ ನೀಡಲಿದೆ. ವಂದೇ ಭಾರತ್ ರೈಲ್ ನಂ. 20632/20631 ಇನ್ನು ಮುಂದೆ ತಿರುವನಂತಪುರ - ಮಂಗಳೂರು ನಡುವೆ ಸಂಚರಿಸಲಿದೆ. ಹೊಸ ರೈಲ್ವೆ ವೇಳಾ ಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಗ್ಗೆ 06.15ಕ್ಕೆ ಹೊರಟು ಮಧ್ಯಾಹ್ನ 3.05 ಕ್ಕೆ ತಿರುವನಂತಪುರ ತಲುಪಲಿದೆ.
ಹಾಗೆಯೇ ತಿರುವನಂತಪುರದಿಂದ ಸಂಜೆ 4.05 ಕ್ಕೆ ಬಿಟ್ಟು ಮಂಗಳೂರನ್ನು ರಾತ್ರಿ 12.40ಕ್ಕೆ ತಲುಪಲಿದೆ. ಬುಧವಾರ ಹೊರತು ಪಡಿಸಿ ವಾರದ ಆರು ದಿನಗಳಲ್ಲಿ ಈ ವಂದೇ ಭಾರತ್ ರೈಲು ಲಭ್ಯವಿರಲಿದೆ.
ಸೆ.24, 2023 ರಂದು ತಿರುವನಂತಪುರ-ಕಾಸರಗೋಡು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. 8 ಗಂಟೆ 5 ನಿಮಿಷದಲ್ಲಿ ತಿರುವನಂತಪುರ - ಕಾಸರಗೋಡು ತಲುಪುತ್ತಿತ್ತು. ಇನ್ನು ಈ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು. ಇದೀಗ ರೈಲ್ವೆ ಮಂಡಳಿ, ಮಂಗಳೂರುವರೆಗೆ ವಿಸ್ತರಿಸಿ ಆದೇಶಿಸಿದೆ.
ಇದನ್ನೂ ಓದಿ: ರೈಲ್ವೆಯಲ್ಲಿ ಭಾರಿ ಬದಲಾವಣೆಗೆ ಬಜೆಟ್ನಲ್ಲಿ ಮುನ್ನುಡಿ: ಮೂರು ರೈಲ್ವೆ ಕಾರಿಡಾರ್ಗಳ ಘೋಷಣೆ
ಕಡಲೂರಿಗೆ ಎರಡು ವಂದೇ ಭಾರತ್ ಎಕ್ಸ್ಪ್ರೆಸ್:ಮಂಗಳೂರು - ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿ.31, 2023 ರಂದು ಆರಂಭವಾಗಿತ್ತು. ಇದೀಗ ತಿರುವನಂತಪುರ ಕಾಸರಗೋಡು ರೈಲು ಮಂಗಳೂರುವರೆಗೆ ವಿಸ್ತರಣೆಯಾಗಿದೆ. ಈ ಮೂಲಕ ಮಂಗಳೂರಿಗೆ ಎರಡು ಫಾಸ್ಟ್ ರೈಲುಗಳ ಸೇವೆ ಲಭ್ಯವಾಗಿದೆ.
ಮಂಗಳೂರು - ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಡಿ.31ರಂದು ಅಯೋಧ್ಯೆಯಿಂದ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆ ಬಳಿಕ ಮಂಗಳೂರಿನಿಂದ ಗೋವಾಗೆ ಈ ರೈಲು ಸಂಚಾರ ಆರಂಭಿಸಿತ್ತು. ಮಂಗಳೂರು ಮಡಗಾಂವ್ ಮಧ್ಯೆ 320 ಕಿ.ಮೀ. ದೂರ ಇದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್, ಉಡುಪಿ, ಕಾರವಾರ, ಮಡಗಾಂವ್ನಲ್ಲಿ ನಿಲುಗಡೆಯಾಗಲಿದೆ. 4 ಗಂಟೆ 35 ನಿಮಿಷ ಪ್ರಯಾಣಕ್ಕೆ ಸೀಮಿತವಾಗಿರುವ ಈ ರೈಲಿನಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಮಾತ್ರ ಇದೆ. ಸ್ಲೀಪರ್ ಕೋಚ್ ಇರುವುದಿಲ್ಲ.
ಈ ರೈಲು ಮಂಗಳೂರು ಮಡಗಾಂವ್ ರೈಲು ಮಂಗಳೂರು ಸೆಂಟ್ರಲ್ನಿಂದ ಬೆಳಗ್ಗೆ 8.30 ಕ್ಕೆ ಹೊರಟು, ಉಡುಪಿಗೆ 9.48, ಕಾರವಾರಕ್ಕೆ 12.08 ಮತ್ತು ಮಧ್ಯಾಹ್ನ 1.05 ಕ್ಕೆ ಮಡಗಾಂವ್ ತಲುಪಲಿದೆ. ಸಂಜೆ 6.10 ಕ್ಕೆ ಮಡಗಾಂವ್ನಿಂದ ಹೊರಟು ಕಾರವಾರಕ್ಕೆ 6.55, ಉಡುಪಿಗೆ ರಾತ್ರಿ 9.12 ಮತ್ತು ರಾತ್ರಿ 10.45 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಇದನ್ನೂ ಓದಿ: 'ವಿದ್ಯುದ್ದೀಕರಣ ಮುಗಿದ ತಕ್ಷಣ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು ಓಡಾಟ'