ಕಲಬುರಗಿ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಮಲಾಪುರ ತಾಲೂಕಿನ ಡೊಂಗರಗಾಂವ ಕ್ರಾಸ್ ಹತ್ತಿರ ಇಂದು ನಡೆದಿದೆ. ವಿಶಾಲ್ ಜಾಧವ (20), ಚಂದ್ರಕಾಂತ ಹೊಳಕುಂದಿ (23) ಮತ್ತು ಸಮೀರ್ (23) ಮೃತ ದುರ್ದೈವಿಗಳು.
ಮೃತ ಮೂವರು ಕಿಣ್ಣಿ ಸಡಕ್ ಗ್ರಾಮದವರಾಗಿದ್ದು, ಬೈಕ್ ಮೇಲೆ ಕಮಲಾಪುರಕ್ಕೆ ಹೊರಟಿದ್ದಾಗ ಘಟನೆ ನಡೆದಿದೆ. ಮೃತ ಚಂದ್ರಕಾಂತನಿಗೆ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರದಲ್ಲಿ ಉದ್ಯೋಗ ಲಭಿಸಲಿತ್ತು. ನಾಳೆ (ಮೇ 28) ಹುಬ್ಬಳಿಯಲ್ಲಿ ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನವಿತ್ತು. ಇಂದು ಬೆಳಗ್ಗೆ ಹುಬ್ಬಳ್ಳಿಗೆ ತೆರಳಲು ಸಜ್ಜಾಗಿದ್ದ. ಹಾಗಾಗಿ ಸ್ನೇಹಿತರಾದ ಸಮೀರ ಹಾಗೂ ವಿಶಾಲ್ ಸೇರಿ ಚಂದ್ರಕಾಂತನನ್ನು ಕಮಲಪುರದವರಿಗೆ ಬಿಟ್ಟುಬರಲು ಬೈಕ್ ಮೇಲೆ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ವಿಜಯಪುರದಿಂದ ಬಸವಕಲ್ಯಾಣಕ್ಕೆ ಹೊರಟಿದ್ದ ಸಾರಿಗೆ ಬಸ್ ಮತ್ತು ಇವರ ಬೈಕ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.