ಕರ್ನಾಟಕ

karnataka

ವಿಧಾನಸಭೆ: ಪ್ರತಿಪಕ್ಷಗಳ ಮುಡಾ ಗದ್ದಲದ ಮಧ್ಯೆ 3 ವಿಧೇಯಕ ಪಾಸ್ - Karnataka Assembly Session

By ETV Bharat Karnataka Team

Published : Jul 25, 2024, 7:04 AM IST

Updated : Jul 25, 2024, 9:11 AM IST

ರಾಜ್ಯ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದೆ. ಬುಧವಾರ ನಡೆದ ವಿಧಾನಸಭೆ ಕಲಾಪದಲ್ಲಿ ಒಟ್ಟು ಆರು ವಿಧೇಯಕಗಳನ್ನು ಸರ್ಕಾರ ಮಂಡಿಸಿದ್ದು, ಮೂರಕ್ಕೆ ಗದ್ದಲದ ನಡುವೆ ಅಂಗೀಕಾರ ದೊರೆಯಿತು.

ಮುಂಗಾರು ಅಧಿವೇಶನದಲ್ಲಿ ವಿಧೇಯಕ ಅಂಗೀಕಾರ, ಮಂಡನೆ
ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ (ETV Bharat)

ಬೆಂಗಳೂರು:ಪ್ರತಿಪಕ್ಷಗಳ ಮುಡಾ 'ಹಗರಣ' ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಬುಧವಾರ ಮೂರು ವಿಧೇಯಕಗಳು ಪಾಸ್ ಆದವು.

ವಿಧಾನಸಭೆ ಅಂಗೀಕರಿಸಿದ ಮಸೂದೆಗಳು: 8,573 ಕೋಟಿ ರೂ.ಗಳ ಪೂರಕ ಅಂದಾಜುಗಳ ಧನ ವಿನಿಯೋಗ ವಿಧೇಯಕ, ನೀರಾವರಿ ಕಾಲುವೆಗಳಿಂದ ಅಕ್ರಮವಾಗಿ ನೀರೆತ್ತುವುದನ್ನು ತಡೆಯಲು ಹಾಗೂ ಕಾಲುವೆಗಳ ಕೊನೆಯ ಭಾಗದ ರೈತರಿಗೂ ನೀರು ತಲುಪಿಸಲು ಅನುಕೂಲವಾಗಲು ರೂಪಿಸಿರುವ ಕರ್ನಾಟಕ ನೀರಾವರಿ ತಿದ್ದುಪಡಿ ವಿಧೇಯಕ- 2024 ಮತ್ತು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ -2024ಕ್ಕೆ ವಿಧಾನಸಭೆ ಅನುಮೋದನೆ ನೀಡಿತು.

ಪೂರಕ ಅಂದಾಜಿನಲ್ಲಿ, ರಾಜ್ಯದ ವಿವಿಧ ಮಠಗಳು ಹಾಗೂ ದೇವಾಲಯಗಳಿಗೆ ನೀಡಲು 85 ಕೋಟಿ ರೂ.ಗಳಷ್ಟು ಮುಖ್ಯಮಂತ್ರಿಗಳ ವಿಶೇಷ ಅನುದಾನ ಒದಗಿಸುವುದು ಸೇರಿ ಕಂದಾಯ ಇಲಾಖೆಗೆ 6,993 ಕೋಟಿ ರೂ.ಗಳ ಬೇಡಿಕೆಗೆ ಸದನದ ಒಪ್ಪಿಗೆ ಪಡೆಯಲಾಯಿತು.

ನಗರಾಭಿವೃದ್ಧಿ ಇಲಾಖೆಯ 200 ಕೋಟಿ ರೂ., ಲೋಕೋಪಯೋಗಿ ಇಲಾಖೆಯ 250 ಕೋಟಿ ರೂ., ಕಾನೂನು ಇಲಾಖೆಯ 161 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ 450 ಕೋಟಿ ರೂ. ಸೇರಿ ಒಟ್ಟು 28 ಇಲಾಖೆಗಳಿಗೆ ಸಂಬಂಧಿಸಿದ ಬೇಡಿಕೆಗಳ ಮೇಲಿನ ಪೂರಕ ಅಂದಾಜುಗಳಿಗೂ ಅಂಗೀಕಾರ ಸಿಕ್ಕಿದೆ.

ಗುತ್ತಿಗೆ ನೌಕರಿಯಲ್ಲಿ ಮೀಸಲಾತಿ ಮಸೂದೆ ಮಂಡನೆ:ಸರ್ಕಾರಿ ಇಲಾಖೆಗಳಲ್ಲಿ, ನಿಗಮ-ಮಂಡಳಿ, ವಿಶ್ವವಿದ್ಯಾಲಯ ಮುಂತಾದವುಗಳಲ್ಲಿ ಗುತ್ತಿಗೆ ಆಧಾರದ ಮೇಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕ- 2024 ಅನ್ನು ಮಂಡಿಸಲಾಯಿತು.‌

ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ತಿದ್ದುಪಡಿ ವಿಧೇಯಕ-2024, ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕಗಳನ್ನು ಮಂಡಿಸಲಾಯಿತು.

ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ನೀಡುವ ತಿದ್ದುಪಡಿ ವಿಧೇಯಕ ಮಂಡನೆ:ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ಒದಗಿಸುವ ಹಾಗೂ ಹಲ್ಲೆ, ನಿಂದಿಸುವವರಿಗೆ ಜಾಮೀನುರಹಿತ ಪ್ರಕರಣ ದಾಖಲಿಸಲು ಅವಕಾಶ ನೀಡುವ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕ-2024 ಅನ್ನು ಸದನದಲ್ಲಿ ಮಂಡಿಸಲಾಗಿದೆ.

ಇದನ್ನೂ ಓದಿ:ಶಕ್ತಿ ಗ್ಯಾರಂಟಿ ಸಫಲತೆಯ ಒಂದು ವರ್ಷ: ಕೈಪಿಡಿ ಬಿಡುಗಡೆ ಮಾಡಿ ಸಾಧನೆ ಜನರ ಮುಂದಿಟ್ಟ ರಾಮಲಿಂಗಾರೆಡ್ಡಿ - Booklet Released

Last Updated : Jul 25, 2024, 9:11 AM IST

ABOUT THE AUTHOR

...view details