ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬಳ್ಳಾರಿ ಸೆರಮನೆಯಲ್ಲಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸೆ. 27ಕ್ಕೆ ಮುಂದೂಡಿ 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದರೆ, ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಷರತ್ತುಬದ್ದ ಜಾಮೀನು ದೊರೆತಿದೆ.
ಹತ್ಯೆ ಪ್ರಕರಣದ 15 ಹಾಗೂ 17ನೇ ಆರೋಪಿಗಳಾಗಿರುವ ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ಅವರಿಗೆ ಸಿಸಿಹೆಚ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಕರಣದ 16ನೇ ಆರೋಪಿ ಕೇಶವ ಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ. ಈ ಮೂವರು ಆರೋಪಿಗಳೆಲ್ಲರೂ ತುಮಕೂರು ಕಾರಾಗೃಹದಲ್ಲಿದ್ದಾರೆ. ಹತ್ಯೆಯಾಗಿ ಮೂರು ತಿಂಗಳ ಬಳಿಕ ಮೊದಲ ಬಾರಿಗೆ ಪ್ರಕರಣದ ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ.
ಜಾಮೀನು ಕೋರಿ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡು ಇಂದಿಗೆ ವಿಚಾರಣೆ ಮುಂದೂಡಿತ್ತು. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದೆ ವಿಶೇಷ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಕೂಡದು. ಅಲ್ಲದೇ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನ ಪುರಸ್ಕರಿಸಿದ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ಸೆ. 27ಕ್ಕೆ ನ್ಯಾ. ಜೈಶಂಕರ್ ಮುಂದೂಡಿ ಆದೇಶಿಸಿದರು. ಇದೇ ವೇಳೆ ಪ್ರಕರಣದ ಒಂದನೇ ಆರೋಪಿ ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನ ಸೆ.25ಕ್ಕೆ ಮುಂದೂಡಿದರು.
ಇದನ್ನೂ ಓದಿ :ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಜಾಮೀನು ಅರ್ಜಿ ಇಂದು ವಿಚಾರಣೆ - Darshan Bail Plea Hearing Today