ಬೆಂಗಳೂರು: ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ಗೆ ಟಚ್ ಆಗಿದೆ ಎಂದು, ಪುಂಡರ ಗುಂಪೊಂದು ಮುಂದೆ ಹೋಗುತ್ತಿದ್ದ ಎರಡು ಕಾರುಗಳನ್ನು ಚೇಸ್ ಮಾಡಿ ಚಾಕು ತೋರಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತೊಂದು ಘಟನೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕರು ಮುಂದೆ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಚಾಕು ತೋರಿಸಿದ್ದು, ಈ ಸಂಬಂಧ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ರಾತ್ರಿ ಎರಡು ಕಾರುಗಳನ್ನು ಫಾಲೋ ಮಾಡಿಕೊಂಡು ಅಡ್ಡಗಟ್ಟಿದ ಪುಂಡರು ಕಾರಿನ ಗಾಜು ಒಡೆದು ಪುಡಿ - ಪುಡಿ ಮಾಡಿದ್ದಾರೆ. ಆರೋಪಿಗಳು ಹಲ್ಲೆ ಮಾಡಿರುವ ದೃಶ್ಯ ಕಾರಿನ ಡ್ಯಾಷ್ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರು ಹಾಗೂ ಎರಡು ಕಾರುಗಳನ್ನು ಚೇಸ್ ಮಾಡುತ್ತಿದ್ದಾರೆ. ಎರಡು ಬಾರಿ ಕಾರುಗಳ ಮುಂದೆ ತಮ್ಮ ದ್ವಿಚಕ್ರ ವಾಹನ ಅಡ್ಡಗಟ್ಟಿ ಕಾರಿನ ಗ್ಲಾಸಿಗೆ ಒಡೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಕಾರು ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಚೇಸಿಂಗ್ ಸುಮಾರು ಒಂದೂವರೆ ಕಿಮೀ ವರೆಗೂ ನಡೆದಿದ್ದು, ಈ ಸಂಬಂಧ ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.