thieves-who-threatened-the-techie-and-stole-the-bike-file-a-complaint ಬೆಂಗಳೂರು:ಸ್ನೇಹಿತನನ್ನ ಭೇಟಿಯಾಗಲು ಬಂದಿದ್ದ ಟೆಕ್ಕಿಯೊಬ್ಬರನ್ನ ಅಡ್ಡಗಟ್ಟಿದ ಕಿಡಿಗೇಡಿಗಳ ಗುಂಪೊಂದು ಆತನನ್ನ ಬೆದರಿಸಿ ಬೈಕ್ ಕೀ ಕಸಿದು ಪರಾರಿಯಾದ ಘಟನೆ ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಚಂದ್ರಾ ಲೇಔಟ್ನ ಬಿಸಿಸಿ ಲೇಔಟಿನಲ್ಲಿ ನಡೆದಿದೆ. ಘಟನೆ ಸಂಬಂಧ ಟೆಕ್ಕಿ ಇಮ್ಯಾನ್ಯುಯಲ್ ನೀಡಿದ ದೂರಿನ ಮೇರೆಗೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಇಮ್ಯಾನ್ಯುಯೆಲ್ ತಮ್ಮ ಸ್ನೇಹಿತನಿಗೆ ಡೆಬಿಟ್ ಕಾರ್ಡ್ ಕೊಡುವುದಕ್ಕಾಗಿ ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಚಂದ್ರಾ ಲೇಔಟ್ನ ಬಿಸಿಸಿ ಲೇಔಟ್ಗೆ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ನಾಲ್ವರು ಯುವಕರ ಗುಂಪೊಂದು ಇಮ್ಯಾನ್ಯುಯೆಲ್ ಬಳಿ, 'ರಾತ್ರಿ ಇಲ್ಲಿ ಏನ್ ಮಾಡ್ತಿದ್ದೀಯಾ? ಯಾರೋ ನೀನು? ಬ್ಯಾಗಲ್ಲಿ ಏನಿದೆ? ದುಡ್ಡೇನಾದ್ರೂ ಇದೆಯಾ ಅಂತ ಆವಾಜ್ ಹಾಕಿ ಬ್ಯಾಗ್ ಕಸಿದು ಚೆಕ್ ಮಾಡಿದ್ದಾರೆ. ನಂತರ ಆತನ ಬಳಿ ಹಣವಿಲ್ಲ ಎಂದು ತಿಳಿದಾಗ ಬೈಕ್ ಕೀ ಕಸಿದುಕೊಂಡು ಆಟೋದಲ್ಲಿ ತೆರಳಿದ್ದಾರೆ.
ಈ ವೇಳೆ ತನ್ನ ಬೈಕ್ ಕೀಗಾಗಿ ಇಮ್ಯಾನ್ಯುಯೆಲ್ ಆಟೋ ಹಿಂದೆ ಓಡಲಾರಂಭಿಸಿದ್ದಾರೆ. ಸ್ವಲ್ಪ ದೂರ ಹೋದ ಆರೋಪಿಗಳು ಆಟೋವನ್ನು ಹಿಂದಿರುಗಿಸಿಕೊಂಡು ಬಂದು ಇಮ್ಯಾನ್ಯುಯೆಲ್ ಮೇಲೆ ಹಲ್ಲೆ ನಡೆಸಿ ಬೈಕ್ ಕದ್ದೊಯ್ದಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಇಮ್ಯಾನ್ಯುಯೆಲ್ ತಕ್ಷಣ ಪೊಲೀಸ್ ನಿಯಂತ್ರಣ ಕೋಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪುನಃ ಅದೇ ಸ್ಥಳಕ್ಕೆ ಬೈಕ್ ತಂದು ನಿಲ್ಲಿಸಿದ ಕಿಡಿಗೇಡಿಗಳು: ವಿಚಿತ್ರ ಎಂದರೆ ಗುರುವಾರ ಸಂಜೆ ವೇಳೆಗೆ ಆರೋಪಿಗಳು ಪುನಃ ಅದೇ ಸ್ಥಳಕ್ಕೆ ಬೈಕ್ ತಂದು ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಆಟೋ ನಂಬರ್ ಪ್ಲೇಟ್ ಆಧರಿಸಿ ಅವರ ಪತ್ತೆಗಾಗಿ ಶೋಧ ಆರಂಭಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಸಂಚಾರ ನಿಮಯ ಉಲ್ಲಂಘಿಸಿದವರಿಗೆ ಶಾಕ್: 50 ಸಾವಿರಕ್ಕೂ ಹೆಚ್ಚು ದಂಡದ ಮೊತ್ತ ದಾಟಿದವರ ಮನೆ ಬಾಗಿಲಿಗೆ ಪೊಲೀಸರು!