ಮೈಸೂರು: "ಲೋಕಾಯುಕ್ತ ತನಿಖೆಗೆ ಹಾಜರಾಗುವಂತೆ ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ಸ್ವಾಗತಾರ್ಹ. ಆದರೆ ಲೋಕಾಯುಕ್ತ ತನಿಖೆ ಬಗ್ಗೆ ಅನುಮಾನ ಇದೆ. ಆದ್ದರಿಂದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಹೈಕೋರ್ಟ್ನಲ್ಲಿ ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆದಿದೆ" ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಡಾದಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಭಾವಿಗಳ ಹೆಸರುಗಳು ಕೇಳಿಬಂದಿವೆ. ಇಂತಹ ಪ್ರಕರಣವನ್ನು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಲೋಕಾಯುಕ್ತ ತನಿಖೆ ಮಾಡುವುದು ಸೂಕ್ತವಲ್ಲ" ಎಂದರು.
"ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ತಲೆಮರೆಸಿಕೊಂಡಿದ್ದಾರೆ. ಮತ್ತೊಬ್ಬ ಮಾಜಿ ಆಯುಕ್ತ ನಟೇಶ್ ಜಾರಿ ನಿರ್ದೇಶನಾಲಯ (ಇ.ಡಿ) ವಶದಲ್ಲಿದ್ದಾರೆ. ದಿನೇಶ್ ಕುಮಾರ್ ಹಾಗೂ ನಟೇಶ್ ಮುಡಾ ಆಯುಕ್ತರಾಗಿದ್ದಾಗ ಅವರು ವಾಸವಾಗಿದ್ದ ಅಧಿಕೃತ ನಿವಾಸದಲ್ಲಿ ಸಿಸಿಟಿವಿ ಕ್ಯಾಮರಾ, ಡಿವಿಆರ್ ನಾಪತ್ತೆ ಆಗಿವೆ. ಈ ಕುರಿತು ತನಿಖೆ ನಡೆಸುವಂತೆ ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ" ಎಂದು ಸ್ನೇಹಮಯಿ ಕೃಷ್ಟ ತಿಳಿಸಿದರು.
ಸ್ನೇಹಮಯಿ ಕೃಷ್ಣ (ETV Bharat) ಹೈಕೋರ್ಟ್ ನೋಟಿಸ್; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ತಮ್ಮ ಕುಟುಂಬಸ್ಥರಿಗೆ ಬದಲಿ ನಿವೇಶನ ಪಡೆದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆರೋಪವನ್ನು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಗೆ ವಹಿಸಿ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ಸಂಬಂಧ ಮಂಗಳವಾರ ರಾಜ್ಯ ಉಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ, ಮತ್ತವರ ಪತ್ನಿ ಮತ್ತು ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿದೆ. ಅಲ್ಲದೆ, ರಾಜ್ಯ ಗೃಹ ಸಚಿವಾಲಯ, ಗೃಹ ಇಲಾಖೆ, ಸಿಬಿಐ, ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ. ಎಂ. ಪಾರ್ವತಿ ಸೇರಿದಂತೆ ಒಟ್ಟು 12 ಮಂದಿಗೂ ನೋಟಿಸ್ ಜಾರಿ ಮಾಡಿದೆ. ಜತೆಗೆ, ಅಕ್ಟೋಬರ್ 25ರ ವರೆಗೆ ನಡೆದಿರುವ ತನಿಖಾ ವರದಿಯನ್ನು ನ್ಯಾಯಪೀಠದ ಮುಂದೆ ಪ್ರಸ್ತುತ ಪಡಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಮುಡಾ ಹಗರಣ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ: ಕೇಂದ್ರ, ರಾಜ್ಯ, ಸಿದ್ದರಾಮಯ್ಯ ಮತ್ತವರ ಪತ್ನಿಗೆ ಹೈಕೋರ್ಟ್ ನೋಟಿಸ್