ಕಾರವಾರ:ಬಿರುಗಾಳಿ ಹಾಗೂ ಮಳೆಯಿಂದ ಹಾನಿಯಾಗಿದ್ದ ದಾಂಡೇಲಿ ವಿಭಾಗದ 110 ಕೆವಿ ಸೂಪಾ - ಅನಮೋಡ್ ವಿದ್ಯುತ್ ಮಾರ್ಗವನ್ನು ಹೆಸ್ಕಾಂ ನೆರವಿನೊಂದಿಗೆ ಕೆಪಿಟಿಸಿಎಲ್ ಸಿಬ್ಬಂದಿ ಪ್ರವಾಹದ ನೀರಿನಲ್ಲಿ ತೆರಳಿ ದುರಸ್ತಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಸಾಕಷ್ಟು ಅನಾಹುತ ಸೃಷ್ಟಿಸಿದ್ದು, ಮಳೆಯ ಜೊತೆಗೆ ಬೀಸುತ್ತಿರುವ ಜೋರು ಗಾಳಿಯಿಂದ ಬೃಹತ್ ಮರಗಳು ಧರೆಗುರುಳುತ್ತಿವೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಸು ಗ್ರಾ.ಪಂ ವ್ಯಾಪ್ತಿಯ ಚಾಂದೇವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ಮೇಲೆ ಬೃಹತ್ ಮರ ಉರುಳಿತ್ತು. ಇದರಿಂದ ಬಜಾರ್ ಕುನಾಂಗ್, ಕ್ಯಾಸಲ್ ರಾಕ್, ಅಸು ಹಾಗೂ ಅಕೇತಿ ಗ್ರಾ.ಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳಿಗೆ ಕಳೆದ ಮೂರು ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಹೆಸ್ಕಾಂಗೆ ದೂರು ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಸಿಬ್ಬಂದಿ ದುರಸ್ತಿ ಕಾರ್ಯಕ್ಕೆ ಮುಂದಾದರೂ, ಮರ ಬಿದ್ದ ಚಾಂದೇವಾಡಿ ಗ್ರಾಮಕ್ಕೆ ತೆರಳಲು ಪಾಂಡ್ರಿ ನದಿಯ ನೀರು ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿತ್ತು. ಸೂಪಾ ಡ್ಯಾಂ ನೀರಿನ ಪ್ರಮುಖ ಮೂಲವಾದ ಪಾಂಡ್ರಿ ಹಳ್ಳದಿಂದ ನಿತ್ಯ ಅಂದಾಜು 5,000 ರಿಂದ 6,000 ಕ್ಯೂಸೆಕ್ ನೀರಿನ ಹರಿವು ಇದೆ. ಇದರಿಂದಾಗಿ ಪಾಂಡ್ರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿ, ನೆರೆ ಸೃಷ್ಟಿಯಾಗಿದೆ. ಗ್ರಾಮಕ್ಕೆ ತೆರಳುವ ಸೇತುವೆ ಸಹ ನೀರಿನಲ್ಲಿ ಮುಳುಗಿರುವುದರಿಂದ ಚಾಂದೇವಾಡಿ ಗ್ರಾಮಕ್ಕೆ ತೆರಳಿ ವಿದ್ಯುತ್ ದುರಸ್ತಿ ಮಾಡುವುದು ಕಷ್ಟವಾಗಿತ್ತು.