ಬೆಂಗಳೂರು: ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಎಂ.ಜಿ. ರಸ್ತೆಯ ಪಾದಚಾರಿ ಮಾರ್ಗದಲ್ಲಿ ಸ್ಥಳೀಯ ಮಾಜಿ ಶಾಸಕ ಹಾಲಂಗೂರು ಶ್ರೀನಿವಾಸಗೌಡ ಪುತ್ಥಳಿ ನಿರ್ಮಾಣ ಮಾಡುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ಮುಳಬಾಗಿಲು ತಾಲೂಕು ನಾಗರಿಕ ವೇದಿಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರೀಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಅಲ್ಲದೇ, ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಗೊಳಿಸಿದೆ. ಜತೆಗೆ ಪುತ್ಥಳಿ ಸ್ಥಾಪನೆ ಕಾರ್ಯ ಮುಂದುವರಿಸಬಾರದು ಹಾಗೂ ಜಿಲ್ಲಾಧಿಕಾರಿ ಸ್ಥಳದ ಸರ್ವೆ ಮಾಡಬೇಕು ಮಾಡಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮುಳಬಾಗಿಲಿನ ಎಂ.ಜಿ. ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅನಧೀಕೃತವಾಗಿ ಸ್ಥಳೀಯ ಮಾಜಿ ಶಾಸಕರ ಪುತ್ಥಳಿ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಇದರಿಂದಾಗಿ ರಸ್ತೆಯಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಜನಸಾಮಾನ್ಯರು ತೊಂದರೆ ಎದುರಿಸಬೇಕಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಮುಂದುವರಿದು, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸಾರ್ವಜನಿಕ ಜಾಗದಲ್ಲಿ ಈ ರೀತಿ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಇದೀಗ ಕಾನೂನು ಬಾಹಿರವಾಗಿ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪುತ್ಥಳಿ ತೆರವುಗೊಳಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಮನವಿ ಮಾಡಿದರು.
ಅರ್ಜಿಯಲ್ಲಿರುವ ಅಂಶಗಳು:ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ದೇಶದ ಅತಿದೊಡ್ಡ ಟೊಮೊಟೊ ಮಾರುಕಟ್ಟೆ ಇದೆ. ತಾಲೂಕಿನ ವಿವಿಧೆಡೆಯಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಇಲ್ಲಿನ ಮಾರುಕಟ್ಟೆಗೆ ಬರುತ್ತಾರೆ. ಸಹಸ್ರಾರು ಮಂದಿ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮುಳಬಾಗಿಲು ಪಟ್ಟಣಕ್ಕೆ ಆಗಮಿಸುತ್ತಾರೆ. ಕೃಷಿ ಚಟುವಟಿಕೆ ಹೆಚ್ಚಾದಂತೆ ಪಟ್ಟಣದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ, ಕೆಲವೊಮ್ಮೆ ಸಂಚಾರ ಸ್ಥಗಿತವಾಗಿರುವ ಉದಾಹರಣೆಗಳು ಇವೆ. ಈಗಾಗಲೇ ಹಲವು ಸಂಸ್ಥೆಗಳು ರಸ್ತೆ ಅಗಲೀಕರಣದ ಬೇಡಿಕೆ ಇಟ್ಟಿದ್ದವು. ಆದರೆ, ಅನುದಾನದ ಕೊರತೆ ಹಾಗೂ ಇನ್ನಿತರ ಕಾರಣದಿಂದ ಅದು ಈಡೇರದೆ ಬಾಕಿ ಉಳಿದಿದೆ.
ಪಟ್ಟಣದ ರಸ್ತೆಯಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇವೆ. ಈ ಬೆನ್ನೆಲೆ ಮೇ ತಿಂಗಳಲ್ಲಿ ಪಟ್ಟಣದ ಸೌಂದರ್ಯ ಸರ್ಕಲ್ ಬಳಿ ಪಾದಚಾರಿ ಮಾರ್ಗದಲ್ಲಿ ಸ್ಥಳೀಯ ಮಾಜಿ ಶಾಸಕ ಹಾಲಂಗೂರು ಶ್ರೀನಿವಾಸಗೌಡ ಪುತ್ಥಳಿ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಈ ರೀತಿ ಪಾದಚಾರಿ ಮಾರ್ಗದಲ್ಲಿ ಪುತ್ಥಳಿ ನಿರ್ಮಾಣ ಮಾಡುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ. ಒಂದಿಷ್ಟು ಖಾಸಗಿ ಜನರ ಭಾವನೆ ಮತ್ತು ಗರ್ವದ ಪ್ರತೀಕವಾಗಿ ಈ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಅದನ್ನು ಕೂಡಲೇ ತೆರವುಗೊಳಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಕೋರಲಾಗಿದೆ.
ಇದನ್ನೂ ಓದಿ:ಕೆಆರ್‌ಎಸ್ ಸುತ್ತ ಗಣಿಗಾರಿಕೆ: ಅಧ್ಯಯನ ವರದಿಗೆ ಕಾಲಾವಕಾಶ ಕೋರಿದ ಅಣೆಕಟ್ಟು ಸುರಕ್ಷತಾ ಸಮಿತಿ - Mining Permission Around KRS