ಬೆಂಗಳೂರು:ರಾಷ್ಟ್ರ ಮತ್ತು ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದ ಖ್ಯಾತ ಶೂಟರ್ ಒಬ್ಬರಿಗೆ ಹೆಚ್ಚುವರಿಯಾಗಿ ನಾಲ್ಕು ಶಸ್ತ್ರಾಸ್ತ್ರಗಳು ಮತ್ತು 25 ಸಾವಿರ ಮದ್ದು ಗುಂಡುಗಳನ್ನು ಹೊಂದಲು ಕೋರಿರುವ ಮನವಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಕೊಡಗು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಕೊಡಗು ಜಿಲ್ಲೆಯ ನಾಪೋಕ್ಲುವಿನ ಕೋಲ್ಕೇರಿ ಗ್ರಾಮದ ನಿವಾಸಿ ಖ್ಯಾತ ಶೂಟರ್ ಆಗಿರುವ ಸಾಜನ್ ಅಯ್ಯಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರು ಮಹತ್ವಾಕಾಂಕ್ಷೆಯ ಶೂಟರ್ ಆಗಿದ್ದು, 30,000 ಮದ್ದು ಗುಂಡುಗಳೊಂದಿಗೆ 2 ಫೈರ್ ಆರ್ಮ್(ಶಸ್ತ್ರಾಸ್ತ್ರ)ಗಳನ್ನು ಹೊಂದಬಹುದು. ಪ್ರಸಿದ್ಧ ಶೂಟರ್ 10 ಬಂದೂಕುಗಳು ಮತ್ತು 1 ಲಕ್ಷ ಮದ್ದು ಗುಂಡುಗಳನ್ನು ಹೊಂದಬಹುದಾಗಿದೆ. ಅಲ್ಲದೆ, ಶಸ್ತ್ರಾಸ್ತ್ರಗಳನ್ನು ಹೊಂದುವುದಕ್ಕೆ ಸಂಬಂಧಿಸಿದ ವಿನಾಯ್ತಿ ಷರತ್ತು (2)ರ ಪ್ರಕಾರ ಯಾವುದೇ ಪ್ರಸಿದ್ಧ ಶೂಟರ್ 10 ಶಸ್ತ್ರಾಸ್ತ್ರಗಳನ್ನು ಹೊಂದಲು ಅರ್ಹರಾಗಿರುತ್ತಾರೆ. ಅಂದರೆ, ಕ್ರೀಡಾಪಟಗಳಿಗೆ ಎಂಟು ಶಸ್ತ್ರಾಸ್ತ್ರಗಳು ಮತ್ತು ಕಾಯ್ದೆಯ ಸೆಕ್ಷನ್ 3ರ ಸಬ್ ಸೆಕ್ಷನ್(2)ರ ಅಡಿಯಲ್ಲಿ ಸಾಮಾನ್ಯ ಜನರು 2 ಶಸ್ತ್ರಾಸ್ತ್ರಗಳನ್ನು ಹೊಂದಬಹುದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಆದ್ದರಿಂದ ಅರ್ಜಿದಾರರು ಇನ್ನೂ ನಾಲ್ಕು ಶಸ್ತ್ರಾಸ್ತ್ರಗಳನ್ನು ಹೊಂದಬಹುದಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಜಿಲ್ಲಾಧಿಕಾರಿ ಜಾರಿ ಮಾಡಿದ್ದ ನೋಟಿಸ್‌ಅನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರ ಅಯ್ಯಪ್ಪ ಅವರು 2020ರ ಸೆಪ್ಟಂಬರ್ 21ರಂದು ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳ ಪಡೆಯುವುದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. 2022ರ ಡಿಸೆಂಬರ್ 28ರಂದು ಅವರಿಗೆ ಹಿಂಬರಹ ನೀಡಿದ್ದ ಜಿಲ್ಲಾಧಿಕಾರಿಗಳು, ನೀವು(ಅರ್ಜಿದಾರರು) ಖ್ಯಾತ ಮತ್ತು ಪ್ರಸಿದ್ಧ ಶೂಟರ್ ಆಗಲು ಹೊಂದಿರುವ ಅರ್ಹತೆಗಳನ್ನು ಬಹಿರಂಗಪಡಿಸಿಲ್ಲ. ಆದ್ದರಿಂದ ಮುಂದಿನ 15 ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ವಿವರಣೆ ನೀಡಬೇಕು ಎಂದು ತಿಳಿಸಿ ನೋಟಿಸ್ ನೀಡಿದ್ದರು.
ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು, ಖ್ಯಾತ ಶೂಟರ್ ಆಗಿರುವುದರಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದೇನೆ. ಆದ್ದರಿಂದ 10 ಬಂದೂಕುಗಳು ಹೊಂದಲು ಅವಕಾಶವಿದೆ. ಅಲ್ಲದೆ, ಈಗಾಗಲೇ ಮೂರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ನಾಲ್ಕನೇಯದಾಗಿ ಹೆಚ್ಚುವರಿ ಶಸ್ತ್ರಾಸ್ತ್ರ ಹೊಂದಲು ಕೋರಲಾಗಿದೆ. ಆದರೆ, ಅಧಿಕಾರಿಗಳು ವಿನಾ ಕಾರಣ ನೆಪ ಹೇಳುತ್ತಿದ್ದಾರೆ. ಅಲ್ಲದೆ, ಖ್ಯಾತ ಶೂಟರ್ ಎಂಬುದನ್ನು ತಿಳಿದುಕೊಳ್ಳಲು ನೋಟಿಸ್ ಜಾರಿ ಮಾಡಿದ್ದಾರೆ ಎಂದು ನ್ಯಾಯ ಪೀಠಕ್ಕೆ ವಿವರಿಸಿದ್ದರು.
ಸರ್ಕಾರದ ಪರ ವಕೀಲರು, ಶಸ್ತ್ರಾಸ್ತ್ರ ಕಾಯ್ದೆಗೆಯ ನಿಯಮಗಳ ಪ್ರಕಾರ ಅರ್ಜಿದಾರರು ಕೇವಲ ಎರಡು ಶಸ್ತ್ರಾಸ್ತ್ರಗಳನ್ನು ಮಾತ್ರ ಹೊಂದ ಬಹುದಾಗಿದೆ. ಆದರೆ, ಹೆಚ್ಚುವರಿ ಎರಡು ಶಸ್ತ್ರಾಸ್ತ್ರಗಳಿಗಾಗಿ ಮನವಿ ಮಾಡಿದ್ದಾರೆ. ಇದು ಸಮರ್ಥನೀಯವಲ್ಲ ಎಂದು ನ್ಯಾಯ ಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ:33 ಡಿವೈಎಸ್ಪಿ, 132 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ