ಮಂಗಳೂರು: ನಗರದ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ತನ್ನ ಶಿಶು ಮಾರಾಟವಾಗಿದೆ ಎಂಬ ಮಹಿಳೆಯ ಆರೋಪ ನಿರಾಧಾರ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ತನ್ನ ಶಿಶುವನ್ನು ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಮಾರಾಟ ಮಾಡಿದ್ದಾರೆ ಎಂದು ಭವ್ಯಾ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಲೇಡಿಗೋಶನ್ ಆಸ್ಪತ್ರೆ ಮಂಡಳಿ, 2024ರ ಆಗಸ್ಟ್ 18 ರಂದು 9.58 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಭವ್ಯಾ ಎಂಬ ಮಹಿಳೆ ಹೆಣ್ಣು ಶಿಶುವಿಗೆ ಜನ್ಮ ನೀಡಿರುತ್ತಾರೆ. ಶಿಶುವಿಗೆ ಒಂದು ಕಣ್ಣುಗುಡ್ಡೆ ಇಲ್ಲದಿರುವುದನ್ನು ತಜ್ಞರು ಆಕೆಗೆ ತಿಳಿಸಿದ್ದಾರೆ. ಆ ಬಳಿಕ ಭವ್ಯಾ ಹಾಗೂ ಆಕೆಯ ಕುಟುಂಬಸ್ಥರು ಆ ಶಿಶುವು ತಮ್ಮದಲ್ಲ ಎಂದು ಹೇಳುತ್ತಿದ್ದಾರೆ. ಮಾತ್ರವಲ್ಲ ತಮ್ಮ ಶಿಶುವನ್ನು ಆಸ್ಪತ್ರೆಯ ಸಿಬ್ಬಂದಿ ಅದಲು ಬದಲು ಮಾಡಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಆದ್ದರಿಂದ ಪ್ರಕರಣ ಠಾಣೆಯ ಮೆಟ್ಟಿಲೇರಿ ಪೊಲೀಸ್ ತನಿಖೆ ನಡೆದು ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಡಿಎನ್ಎ ಪರೀಕ್ಷೆ ಮಾಡುವ ಸಲುವಾಗಿ ಪ್ರಕ್ರಿಯೆಯನ್ನು ನಡೆಸಲಾಗಿದೆ. ಡಿಎನ್ಎ ಪರೀಕ್ಷೆಯ ವರದಿ ನೇರವಾಗಿ ತನಿಖಾಧಿಕಾರಿಗಳ ಮೂಲಕ ನ್ಯಾಯಾಲಯಕ್ಕೆ ಸಂಬಂಧಿತರು ಸಲ್ಲಿಸಿದ್ದಾರೆ. ಶಿಶುವನ್ನು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ.
ಎರಡು ದಿನಗಳಿಂದ ಭವ್ಯಾ ತನ್ನ ಶಿಶುವನ್ನು ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಮಾರಾಟ ಮಾಡಿದ್ದಾರೆ ಎಂದು ಮಾನಹಾನಿಕರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸದ್ಯ ಪ್ರಕರಣ ನ್ಯಾಯಾಲಯದ ಪರಾಮರ್ಶೆ ಹಂತದಲ್ಲಿರುವ ಸಂದರ್ಭ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸುತ್ತಿದ್ದೇವೆ. ಆದರೂ ಮಹಿಳೆ ಆಸ್ಪತ್ರೆಯ ಬಗ್ಗೆ ಮಾಡಿರುವ ಆರೋಪವು ಸಂಪೂರ್ಣವಾಗಿ ನಿರಾಧಾರವಾಗಿರುತ್ತದೆ ಎಂದು ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಳ್ಳಾರಿಯ ಬಿಮ್ಸ್ನಲ್ಲಿ ಬಾಣಂತಿ ಸಾವು: ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ನಿರ್ಲಕ್ಷ್ಯ ಆರೋಪ