ಬೆಂಗಳೂರು: ಬಾಲ್ಯ ಸ್ನೇಹಿತೆಯ ಮನೆಯಲ್ಲಿಯೇ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮೂಲದ ಚಿರಂಜೀವಿ ಬಂಧಿತ ಆರೋಪಿ. ಕೃತ್ಯ ನಡೆದು ಒಂದೂವರೆ ವರ್ಷದ ಬಳಿಕ ಆರೋಪಿಯನ್ನು ಬಂಧಿಸಿ, ಆತನಿಂದ ಒಟ್ಟು 6 ಲಕ್ಷ ಮೌಲ್ಯದ 95 ಗ್ರಾಂ ಚಿನ್ನದ ಗಟ್ಟಿಯನ್ನ ವಶಕ್ಕೆ ಪಡೆದಿದ್ದಾರೆ.
ದೂರುದಾರೆಗೆ ಬಾಲ್ಯ ಸ್ನೇಹಿತನಾಗಿದ್ದ ಆರೋಪಿ 2022ರಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಆಕೆಯಿಂದ 63 ಗ್ರಾಂ ಚಿನ್ನಾಭರಣಗಳನ್ನು ಪಡೆದುಕೊಂಡು, ಅಂಗಡಿಯಲ್ಲಿ ಅಡಮಾನವಿಟ್ಟು ಹಣ ಪಡೆದಿದ್ದ. ಬಳಿಕ ಅಡಮಾನವಿಟ್ಟಿದ್ದ ಚಿನ್ನದ ಆಭರಣಗಳನ್ನು ಹಿಂದಿರುಗಿಸುವುದಾಗಿ ಕಳೆದ ವರ್ಷ ಏಪ್ರಿಲ್ 13ರಂದು ರಾತ್ರಿ ದೂರುದಾರೆ ಮನೆಗೆ ಬಂದಿದ್ದ.
ಆ ಸಂದರ್ಭದಲ್ಲಿ ದೂರುದಾರೆ, ಆತನಿಗೆ ಉಪಚಾರ ಮಾಡಲೆಂದು ಅಂಗಡಿಗೆ ಜ್ಯೂಸ್ ಮತ್ತು ತಿನಿಸುಗಳನ್ನು ತರಲು ಹೋಗಿದ್ದರು. ವಾಪಸ್ ಮನೆಗೆ ಬಂದು ನೋಡಿದಾಗ ಆರೋಪಿಯು ಮನೆಯ ಬೀರುವಿನಿಂದ 2 ಜೊತೆ ಚಿನ್ನದ ಓಲೆ, 3 ಬ್ರಾಸ್‌ಲೈಟ್, 7 ಚಿನ್ನದ ಉಂಗುರ, 1 ಚಿನ್ನದ ಚೈನ್ ಸೇರಿ ಒಟ್ಟು 83 ಗ್ರಾಂ ಚಿನ್ನಾಭರಣಗಳನ್ನ ಕದ್ದು ಪರಾರಿಯಾಗಿದ್ದ.