ಈಟಿವಿ ಭಾರತ ಪ್ರತಿನಿಧಿಯಿಂದ ಸ್ಥಳದ ವರದಿ (ETV Bharat) ಶಿವಮೊಗ್ಗ:ರಾಜ್ಯದಲ್ಲಿ ಜಲವಿದ್ಯುತ್ ಉತ್ಪಾದನೆ ಮಾಡುವ ಅತಿದೊಡ್ಡ ಜಲಾಶಯವಾದ ಶರಾವತಿ ನದಿಯ ಲಿಂಗನಮಕ್ಕಿ ಡ್ಯಾಂ ಭರ್ತಿಯಾಗುತ್ತಿದ್ದು, ಗುರುವಾರ 3 ಕ್ರಸ್ಟ್ ಗೇಟ್ ಮೂಲಕ 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಇಂದು ಬಿಡಲಾಯಿತು.
ಜಲಾಶಯಕ್ಕೆ ಸುಮಾರು 52 ಸಾವಿರ ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. 1,814 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಇನ್ನೂ 5 ಅಡಿ ಬಾಕಿ ಇರುವಾಗಲೇ ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ಇಲ್ಲಿ ಅತ್ಯಂತ ಕಡಿಮೆ ದರದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಒಟ್ಟು ನಾಲ್ಕು ವಿದ್ಯುತ್ ಘಟಕಗಳಿಂದ ಸುಮಾರು 1469.29 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಜಲಾಶಯದಿಂದ ನದಿಗೆ ನೀರು ಬಿಡುವುದನ್ನು ನೋಡಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಕುರಿತು ಶಿವಮೊಗ್ಗ ಜಿಲ್ಲಾ ಈಟಿವಿ ಭಾರತ ಪ್ರತಿನಿಧಿ ಕಿರಣಕುಮಾರ್ ಸ್ಥಳದ ವರದಿ ಮಾಡಿದ್ದಾರೆ.
ಇದನ್ನೂ ಓದಿ:ರಾಜ್ಯದ ವಿದ್ಯುತ್ ಬರ ನೀಗಿಸುವ ಲಿಂಗನಮಕ್ಕಿ ಜಲಾಶಯ ಭರ್ತಿ; ನೀರು ಬಿಡುಗಡೆಗೆ ಕ್ಷಣಗಣನೆ - Linganamakki Reservoir filled
ನದಿಪಾತ್ರದ ಜನರಿಗೆ ಎಚ್ಚರಿಕೆ:ಒಳಹರಿವಿನ ಆಧಾರದ ಮೇಲೆ ನೀರಿನ ಬಿಡುಗಡೆಯನ್ನು ಹೆಚ್ಚಿಸಲಾಗುವುದು. ಗೇರುಸೊಪ್ಪ ಜಲಾಶಯದಲ್ಲಿ ಸಂಗ್ರಹಣಾ ಸಾಮರ್ಥ್ಯವು ಕಡಿಮೆ ಇದೆ. ಹೀಗಾಗಿ, ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿಯಾಗಿ ಹೊರಬಿಟ್ಟ ನೀರನ್ನು ಗೇರುಸೊಪ್ಪ ಜಲಾಶಯದಲ್ಲಿ ಸಂಗ್ರಹಿಸಲು ಅವಕಾಶವಿಲ್ಲ. ಆದ್ದರಿಂದ ಸುರಕ್ಷತೆಯ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಸಾರ್ವಜನಿಕರಿಗೆ ಪ್ರವಾಹ ಎಚ್ಚರಿಕೆ ಕುರಿತು ಕೆಪಿಸಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದರು.
ಉತ್ತಮ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಮುಂದೆ ಪ್ರವಾಹ ಪರಿಸ್ಥಿತಿ ಉಂಟಾಗಬಾರದೆಂದು ಮುಂಜಾಗ್ರತ ಕ್ರಮವಾಗಿ ನದಿಗೆ ನೀರು ಬಿಡಲಾಗುತ್ತಿದೆ. ನಾಲ್ಕು ವರ್ಷದ ನಂತರ ಲಿಂಗನಮಕ್ಕಿ ಜಲಾಶಯ ತುಂಬಿದೆ. ನದಿ ಪಾತ್ರದಲ್ಲಿ ಜನ, ಜಾನುವಾರುಗಳನ್ನು ಬಿಡಬಾರದು. ಜನ ಸುರಕ್ಷಿತ ಸ್ಥಳದಲ್ಲಿ ಇರಬೇಕು ಎಂದು ನೀರು ಹರಿಸುವ ಬಗ್ಗೆ ಈಗಾಗಲೇ ಬುಧವಾರವೇ ಸಾಗರ ಉಪವಿಭಾಗಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದರು.