ಕರ್ನಾಟಕ

karnataka

By ETV Bharat Karnataka Team

Published : Mar 25, 2024, 5:02 PM IST

ETV Bharat / state

ಲೋಕಸಮರಕ್ಕಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ರಿಂದ ಟೆಂಪಲ್ ರನ್ - DK SHIVAKUMAR TEMPLE RUN

ಲೋಕಸಭೆ ಚುನಾವಣೆ ಹಿನ್ನೆಲ್ಲೆ ಮಾರ್ಚ್ 26 ಮತ್ತು 27 ರಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​​ ಅವರು ರಾಜ್ಯ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು:ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ತಾರಕಕ್ಕೇರುತ್ತಿದೆ. ರಾಜಕೀಯ ಪಕ್ಷಗಳು ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಹಿನ್ನೆಲೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಟೆಂಪಲ್‌ ರನ್‌ ನಡೆಸಲು ಸಜ್ಜಾಗಿದ್ದಾರೆ. ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆಗೆ ಮಾರ್ಚ್​ 28ರಿಂದ ಅಧಿಸೂಚನೆ ಹೊರಬೀಳಲಿದೆ.

ಡಿ.ಕೆ ಶಿವಕುಮಾರ್ ಇಂದು ರಾತ್ರಿಯಿಂದ ಎರಡು ದಿನಗಳ ಕಾಲ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯಲಿದ್ದಾರೆ. ಮಾ.26ಕ್ಕೆ ಡಿಕೆಶಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಅದೇ ದಿನ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ ಶೃಂಗೇರಿ ಶಾರದಾಂಬ ದೇವಸ್ಥಾನ, ಸಂಜೆ ವೇಳೆ ಕೊಲ್ಲೂರುಗೆ ತೆರಳಿ ಮೂಕಾಂಬಿಕೆ ದೇವಿಯ ದರ್ಶನ ಪಡೆಯಲಿದ್ದಾರೆ.

ಮಾರ್ಚ್ 27ರಂದು ಗೋಕರ್ಣಗೆ ತೆರಳಲಿರುವ ಡಿಕೆಶಿ, ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಕುಮಟಾಗೆ ತೆರಳಿ ಲೋಕಸಭೆ ಚುನಾವಣೆ ಹಿನ್ನೆಲೆ ಕೈ ಕಾರ್ಯಕರ್ತರ ಜೊತೆ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ಮೈಸೂರಿಗೆ ತೆರಳಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ. ಸಂಜೆ ಬೆಂಗಳೂರಿಗೆ ಮರಳಲಿದ್ದಾರೆ.

ಬಿಜೆಪಿ ನಾಯಕರಿಂದಲೂ ಟೆಂಪಲ್​ ರನ್​ : ಮತ್ತೊಂದೆಡೆ ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಶ್ರೀ ರಂಭಾಪುರಿ ಪೀಠಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಮಠದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ, ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಕ್ಷೇತ್ರದ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಟುಂಬ ಇತಿಹಾಸ ಪ್ರಸಿದ್ಧ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಚಂಡಿಕಾ ಯಾಗ ನಡೆಸಿದ್ದರು. ಯಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದಂಪತಿ ಭಾಗಿ ಆಗಿದ್ದು, 9 ಋತ್ವಿಜರ ನೇತೃತ್ವದಲ್ಲಿ ಯಾಗ ಜರುಗಿತ್ತು. ಶನಿವಾರ ರಾತ್ರಿ ಪಾರಾಯಣ ನಡೆಸಿ ಭಾನುವಾರ ನವ ಚಂಡಿಕಾ ಯಾಗಕ್ಕೆ ಚಾಲನೆ ನೀಡಲಾಗಿತ್ತು. ಯಾಗಕ್ಕೂ ಮುನ್ನ ಬಿಎಸ್​ವೈ ಕುಟುಂಬ ಮುಂಜಾನೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ, ಹೊರನಾಡು ಅನ್ನಪೂರ್ಣೇಶ್ವರಿ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದರು. ಸುಮಾರು ಮೂರುವರೆ ಗಂಟೆಗಳ ಕಾಲ ಈ ಯಾಗ ನಡೆದಿದ್ದು, ನಂತರ ಪೂರ್ಣಾಹುತಿ ಕಾರ್ಯದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ :ಮಂಡ್ಯ: ಬಿಜೆಪಿ ಅಭ್ಯರ್ಥಿಗಳಿಂದ ಟೆಂಪಲ್ ರನ್ - ಕಾಲಭೈರವೇಶ್ವರನ ದರ್ಶನ ಪಡೆದ ಯದುವೀರ್, ವಿ. ಸೋಮಣ್ಣ

ABOUT THE AUTHOR

...view details