ಬೆಂಗಳೂರು:ಕಳೆದ ಹಲವುವರ್ಷಗಳಿಂದ ಕರ್ನಾಟಕದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಮಳೆಯ ಏರಿಳಿತದ ನಡುವೆ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಕಂಡುಬರುತ್ತಿದೆ. ಕಳೆದ ವರ್ಷಕ್ಕಿಂತ ಈ ಸಲ ತಾಪ ಹೆಚ್ಚಳವಾಗಿರುವುದನ್ನು ಇತ್ತೀಚಿನ ಹವಾಮಾನ ವರದಿಯಲ್ಲಿ ಕಾಣಬಹುದು.
2017ರಲ್ಲಿ 23, 2018ರಲ್ಲಿ 21, 2019ರಲ್ಲಿ 27, 2020ರಲ್ಲಿ 27, 2021ರಲ್ಲಿ 20 ಹಾಗೂ 2022ರಲ್ಲಿ 17 ಜಿಲ್ಲೆಗಳಲ್ಲಿ 40ರಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ದಾಖಲಾಗಿತ್ತು. 2019ರಲ್ಲಿ ರಾಜ್ಯದಲ್ಲೇ ಕಲಬುರಗಿಯಲ್ಲಿ ಅತಿ ಹೆಚ್ಚು 46.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದ್ದು, ಈವರೆಗೆ ದಾಖಲಾದ ಅತ್ಯಧಿಕ ತಾಪಮಾನ. ಈ ಬಾರಿಯೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 4ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ವರದಿಯಾಗುತ್ತಿದೆ.
ಕಳೆದೆರಡು ತಿಂಗಳಿನಿಂದ ರಾಜ್ಯದ ಶೇ.90ರಷ್ಟು ಪ್ರದೇಶಗಳು ಬಿಸಿಲಿನ ತಾಪಕ್ಕೆ ನಲುಗಿವೆ. ಹವಾಮಾನ ಅಸಮತೋಲನದಿಂದ ಹೊತ್ತಲ್ಲದ ಹೊತ್ತಲ್ಲಿ ಎಡೆಬಿಡದೆ ಸುರಿಯುವ ಮಳೆ, ಇದ್ದಕ್ಕಿದ್ದಂತೆ ಮಳೆ ಕುಂಠಿತ, ಭೀಕರ ಬರಗಾಲ, ರಣ ಬಿಸಿಲು, ಮೈ ನಡುಗಿಸುವ ಚಳಿ, ಮಳೆ ದಿನಗಳ ಅವಧಿಯಲ್ಲಿನ ಬದಲಾವಣೆ ಹಾಗೂ ಬೇಸಿಗೆ ಅವಧಿಯ ದಿನಗಳು ಏರಿಕೆಯಾಗುತ್ತಿವೆ. ಬೆಂಗಳೂರು ಸಹ ಇದರಿಂದ ಹೊರತಾಗಿಲ್ಲ.